ಉದಯವಾಹಿನಿ, ಬೆಂಗಳೂರು: ಲೋಕಾಯುಕ್ತ ಅಂತಿಮ ವರದಿ ಬಂದ ನಂತರ ಮುಡಾ ಪ್ರಕರಣದ ಅಂತಿಮ ಚಿತ್ರಣ ಸಿಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಹೈಕೋರ್ಟ್ ನಿರಾಕರಿಸಿರುವುದು ಮುಖ್ಯಮಂತ್ರಿಗೆ ಕ್ಲೀನ್ಚಿಟ್ ನೀಡಿದಂತಲ್ಲ ಎಂದು ತಿಳಿಸಿದರು. ಲೋಕಾಯುಕ್ತ ತನಿಖಾಧಿಕಾರಿಗಳು ಅಂತಿಮ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲು ನ್ಯಾಯಾಲಯ ಸೂಚನೆ ಕೊಟ್ಟಿದೆ.
ಈಗ ಪ್ರಕರಣವನ್ನು ಸಿಬಿಐ ತನಿಖೆ ಕೋರಿ ಅರ್ಜಿದಾರರು ಮೇಲನವಿ ಸಲ್ಲಿಸಿದರು. ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ನಾನು ವ್ಯಾಖ್ಯಾನ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಒಂದು ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತದೆ. ಸ್ನೇಹಮಯಿ ಕೃಷ್ಣ ಎಂಬುವರು ಹೈಕೋರ್ಟ್ಗೆ ಮೇಲನವಿ ಅರ್ಜಿ ಸಲ್ಲಿಸಿದ್ದರು. ಲೋಕಾಯುಕ್ತ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ ಎಂಬುದು ಅವರ ಸಂದೇಹವಾಗಿತ್ತು. ನ್ಯಾಯಾಲಯವು ಎಲ್ಲವನ್ನೂ ಪರಾಮರ್ಶಿಸಿ ತೀರ್ಪು ನೀಡಿದೆ. ನಾವು ನ್ಯಾಯಾಲಯದ ತೀರ್ಪಿಗೆ ತಲೆಬಾಗುತ್ತೇವೆ.
