ಉದಯವಾಹಿನಿ, ಕೊಪ್ಪಳ : ಮೈಕ್ರೋಫೈನಾನ್ಸ್ ಮೇಲೆ ನಿಯಂತ್ರಣ ಸಾಧಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ಇಲ್ಲವೆಂಬ ಕಾರಣಕ್ಕೆ ಸುಗ್ರೀವಾಜ್ಞೆ ರೂಪಿಸಲಾಗಿತ್ತು. ರಾಜ್ಯಪಾಲರು ಸ್ಪಷ್ಟನೆ ಕೇಳಿ ವಾಪಾಸ್ ಕಳುಹಿಸಿದ್ದರು, ಸೂಕ್ತ ವಿವರಣೆಯೊಂದಿಗೆ ಮತ್ತೆ ಮಸೂದೆಯನ್ನು ರಾಜಭವನಕ್ಕೆ ರವಾನಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ವಲಯದಲ್ಲಿ ಉತ್ತಮವಾಗಿ ಕೆಲಸ ಮಾಡುವ ಸಂಸ್ಥೆಗಳಿವೆ. ಅದೇ ರೀತಿ ಕೆಟ್ಟದಾಗಿ ಕೆಲಸ ಮಾಡುವ ಸಂಸ್ಥೆಗಳು ಇವೆ. ನಾನ್ ಬ್ಯಾಂಕಿಂಗ್ ಫೈನಾನ್‌್ಸ ಕಂಪನಿಗಳು ಬ್ಯಾಂಕಿಂಗ್ ರೆಸ್ಯೂಲೇಷನ್ ಆ್ಯಕ್ಟ್ ನಲ್ಲಿ ನೋಂದಾವಣೆಯಾಗಿರುತ್ತವೆ. ಅವುಗಳನ್ನು ನಿಯಂತ್ರಿಸಲು ರಾಜ್ಯಸರ್ಕಾರಗಳಿಗೆ ಅಧಿಕಾರ ಇರುವುದಿಲ್ಲ. ನೇರವಾಗಿ ಆರ್ಬಿಐ ನಿಯಂತ್ರಣ ಮಾಡಬೇಕಾಗುತ್ತದೆ ಎಂದರು.
ಮನಿ ಲ್ಯಾಂಡರಿಂಗ್ ಆ್ಯಕ್ಟ್ ಅನ್ನು ಸಹಕಾರ ಇಲಾಖೆ ಬಳಕೆ ಮಾಡಿ ಅಧಿಕ ಬಡ್ಡಿ ವಸೂಲಿ ಮಾಡುವ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿದೆ. 2004ರಲ್ಲಿ ಕಾಯ್ದೆಗೆ ತಿದ್ದುಪಡಿ ಮೂಲಕ ಇದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹಣಕಾಸು ಸಂಸ್ಥೆಗಳು ಸಾಲ ನೀಡಿ, ವಸೂಲಿಯ ಪ್ರಕ್ರಿಯೆಯನ್ನು ಹೊರಗುತ್ತಿಗೆಗೆ ನೀಡುತ್ತಿವೆ.
ಸಾಲ ವಸೂಲಿ ಮಾಡುವವರು ದಬ್ಬಾಳಿಕೆ ಮಾಡುತ್ತಿದ್ದಾರೆ. ಇದರಿಂದ ಮರ್ಯಾದೆಗೆ ಅಂಜಿ ದಿನನಿತ್ಯ ಆತಹತ್ಯೆಗಳು ವರದಿಯಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯಸರ್ಕಾರ ಸುಗ್ರೀವಾಜ್ಞೆ ರೂಪಿಸಲಾಗಿತ್ತು.ರಾಜ್ಯಪಾಲರು ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯನ್ನು ತಿರಸ್ಕರಿಸಲಿಲ್ಲ, ಇದರಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಿದೆ. ಹೀಗಿದ್ದರೆ ಸಾಲ ನೀಡಲು ಯಾರು ಮುಂದೆ ಬರುತ್ತಾರೆ, ಇದರಿಂದ ಬಡ ಜನರಿಗೆ ತೊಂದರೆ ಆಗುತ್ತದೆ ಎಂದು ಕೆಲ ಸ್ಪಷ್ಟನೆ ಕೇಳಿದ್ದರು. ಅದಕ್ಕೆ ಸೂಕ್ತ ವಿವರಣೆಯೊಂದಿಗೆ ಮತ್ತೆ ರಾಜಭವನಕ್ಕೆ ಎರಡನೇ ಬಾರಿ ರವಾನಿಸಲಾಗಿದೆ. ರಾಜ್ಯಪಾಲರ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡುವುದಾಗಿ ಹೇಳಿದರು.
