
ಉದಯವಾಹಿನಿ, ಬೆಂಗಳೂರು ವಿಶ್ವವಿದ್ಯಾಲಯವು ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳ ಪೈಕಿ ‘ಎ++’ ಶ್ರೇಣಿ ಪಡೆದ ಏಕೈಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದಲ್ಲಿ ಜೆಎನ್‌ಯು ನಂತರ ಈ ಸಾಧನೆ ಮಾಡಿದ ಸರ್ಕಾರಿ ವಿಶ್ವವಿದ್ಯಾಲಯವಾಗಿದೆ ಎಂದು ಬೆಂಗಳೂರು ವಿವಿ ಕುಲಪತಿ ಡಾ ಎಸ್.ಎಂ. ಜಯಕರ್ ತಿಳಿಸಿದರು.ಜ್ಞಾನಜ್ಯೋತಿ ಸಭಾಂಗಣದದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಹಂಚಿಕೊಂಡ ಅವರು, ದೇಶದಲ್ಲಿಯೇ ಮೊದಲ ಡಿಜಿಟಲ್ ಮೌಲ್ಯಮಾಪನ ಕೇಂದ್ರ, ಪಠ್ಯಕ್ರಮ, ಬೋಧನೆ ಹಾಗೂ ಕಲಿಕೆ, ಮೌಲ್ಯಮಾಪನ, ಸಂಶೋಧನೆ, ಮೂಲಸೌಕರ್ಯ, ಕಲಿಕಾ ಸಂಪನ್ಮೂಲ, ವಿದ್ಯಾರ್ಥಿಗಳ ಪ್ರಗತಿ, ಆಡಳಿತ ಮತ್ತು ನಿರ್ವಹಣೆಯಲ್ಲಿ ಉತ್ತಮ ಗುಣಮಟ್ಟ ಹೊಂದಿರುವ ಬೆಂಗಳೂರು ವಿಶ್ವವಿದ್ಯಾಲಯವು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ (ನ್ಯಾಕ್) ‘ಎ++’ ಶ್ರೇಣಿ ಪಡೆದಿದೆ ಎಂದರು.ವಿವಿಯು 2018ರಿಂದ 2022ರ ವರೆಗಿನ ಮೌಲ್ಯಮಾಪನಾ ಅವಧಿಯ ಸ್ವಯಂಅಧ್ಯಯನ ವರದಿಯನ್ನು ನ್ಯಾಕ್‌ಗೆ ಸಲ್ಲಿಸಿತ್ತು. ಕೆಲವೇ ಕೆಲವು ಶೈಕ್ಷಣಿಕ ಸಂಸ್ಥೆಗಳು 4ನೇ ಆವೃತ್ತಿಯಲ್ಲಿ ನ್ಯಾಕ್‌ನಿಂದ ಮಾನ್ಯತೆ ಪಡೆದಿವೆ. ಈ ಮೂಲಕ ವಿವಿ ಸಂಪೂರ್ಣ ಸ್ವಾಯತ್ತತೆ ಪಡೆಯುವ ಅವಕಾಶ ಹೊಂದಿದೆ ಎಂದು ಹೇಳಿದರು.
4ರಲ್ಲಿ 3.75 ಅಂಕ: ಎ++ ಶ್ರೇಣಿ ಪಡೆಯಲು ನ್ಯಾಕ್ ನಿಗದಿ ಮಾಡಿದ್ದ ವಿವಿಧ 7 ಮಾನದಂಡಗಳಾದ ಪಠ್ಯಕ್ರಮ, ಬೋಧನೆ ಹಾಗೂ ಕಲಿಕೆ, ಮೌಲ್ಯಮಾಪನೆ, ಸಂಶೋಧನೆ, ಮೂಲಸೌಕರ್ಯ, ಕಲಿಕಾ ಸಂಪನ್ಮೂಲ, ವಿದ್ಯಾರ್ಥಿಗಳ ಪ್ರಗತಿ, ಆಡಳಿತ ಮತ್ತು ನಿರ್ವಹಣೆ, ಸಾಂಸ್ಥಿಕ ಮೌಲ್ಯಗಳು ಮತ್ತು ಉತ್ತಮ ಅಭ್ಯಾಸಗಳಲ್ಲಿ ವಿವಿಯು 4 ಅಂಕಗಳಲ್ಲಿ ಸರಾಸರಿ 3.75 ಅಂಕ ಗಳಿಸುವ ಮೂಲಕ ಅತ್ಯುತ್ತಮ ಸಾಧನೆಗೈದಿದೆ ಎಂದು ವಿವರಿಸಿದರು.
