ಉದಯವಾಹಿನಿ, ಬೆಂಗಳೂರು: ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನಿರೀಕ್ಷಿತ ಸೋಲನ್ನು ಕಂಡಿರುವ ಹಿನ್ನೆಲೆಯಲ್ಲಿ ಪಕ್ಷದ ನಾಯಕರು ಕಾರ್ಯಕರ್ತರು ಮತ್ತು ಮತದಾರರ ಮನೆ ಬಾಗಿಲಿಗೇ ತೆರಳಿ ಭೇಟಿ ಮಾಡಲು ನಿರ್ಧರಿಸಿದ್ದಾರೆ.
ಈಗಿನ ಸೋಲು ಹಾಗೂ ಮುಂದಿನ ಚುನಾವಣೆಯಲ್ಲಿನ ಗೆಲುವಿನ ಹಿನ್ನೆಲೆಯಲ್ಲಿ ಇಂಥದ್ದೊಂದು ಕಾರ್ಯಕ್ರಮವನ್ನು ಪಕ್ಷ ಹಮ್ಮಿಕೊಂಡಿದ್ದು, ಜೂನ್ 25ರಿಂದ ಐದು ದಿನಗಳ ಕಾಲ ಪಕ್ಷದ ನಾಯಕರು ಮನೆಮನೆಗೂ ಭೇಟಿ ನೀಡಲಿದ್ದಾರೆ.
ಐದು ದಿನಗಳಲ್ಲಿ ರಾಜ್ಯಾದ್ಯಂತದ 50 ಲಕ್ಷ ಮನೆಗಳಿಗೆ ತೆರಳುವ ಗುರಿ ಇರಿಸಿಕೊಳ್ಳಲಾಗಿದೆ.ಮನೆ ಮನೆ ಬಿಜೆಪಿ’ ಎಂಬ ಹೆಸರಿನಲ್ಲಿ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದಲ್ಲಿ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರು-ಸಂಸದರು ಸೇರಿದಂತೆ ಎಲ್ಲ ಸ್ತರದ ನಾಯಕರು ಪಾಲ್ಗೊಳ್ಳಲಿದ್ದಾರೆ. ಪಕ್ಷದ ಕಾರ್ಯಕರ್ತರ ಮನೆಗಳಿಗೆ ತೆರಳಿ ಅವರಲ್ಲಿ ಹೊಸ ವಿಶ್ವಾಸ ಮೂಡಿಸಿ, ಪಕ್ಷದ ಮುಂದಿನ ಯಶಸ್ಸಿಗೆ ಕಾರ್ಯಪ್ರವೃತ್ತರಾಗುವಂತೆ ಹುರಿದುಂಬಿಸಲಾಗುವುದು ಎಂದು ಪಕ್ಷದ ವಕ್ತಾರ ಎನ್.ರವಿಕುಮಾರ್ ತಿಳಿಸಿದ್ದಾರೆ.ಪಕ್ಷದ ಹಿರಿಯ ನಾಯಕರು ಆರೇಳು ತಂಡಗಳನ್ನು ರಚಿಸಿಕೊಂಡು ಐದು ದಿನಗಳಲ್ಲಿ ರಾಜ್ಯದ ಪ್ರತಿ ಮನೆಗೂ ತಲುಪುವ ಗುರಿ ಇರಿಸಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿ ನಂತರ ಮನೆಮನೆಗೂ ಭೇಟಿ ನೀಡಲಿದ್ದಾರೆ. ಅಲ್ಲದೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಬಿಜೆಪಿ ಕೈಗೊಂಡ ಸಾಧನೆ ಹಾಗೂ ಕಾರ್ಯಗಳನ್ನು ಜನರಿಗೆ ಮನದಟ್ಟು ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.ಪ್ರತಿ ಜಿಲ್ಲೆಯಲ್ಲೂ ಒಂದರಿಂದ ಎರಡು ಸಾವಿರದಷ್ಟು ಅತಿಮುಖ್ಯ ಜನರನ್ನು ಗುರುತಿಸಿ, ಅವರೊಂದಿಗೆ ಚರ್ಚೆ ಮಾಡಲಾಗುವುದು. ಈ ಸಲ ಏನು ತಪ್ಪಾಗಿತ್ತು ಎನ್ನುವುದರ ಕುರಿತು ಅವಲೋಕನ ಮಾಡುವ ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಏನು ಮಾಡಬೇಕು ಎಂಬ ಕುರಿತೂ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
