ಉದಯವಾಹಿನಿ, ಬೆಂಗಳೂರು: ಮೆಟ್ರೋ ಪ್ರಯಾಣ ದರ ಏರಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ನಗರದ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಅವರ ನೇತೃತ್ವದ ಈ ಪ್ರತಿಭಟನೆಯಲ್ಲಿ ಮೆಟ್ರೋ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಕೂಡಲೇ ದರ ಏರಿಕೆ ವಾಪಸ್ ಪಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ ಸೇರಿದಂತೆ ಅನೇಕ ಹಿರಿಯ ಮುಖಂಡರು ಭಾಗಿಯಾಗಿದ್ದ ಈ ಪ್ರತಿಭಟನೆಯಲ್ಲಿ, ತಕ್ಷಣವೇ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯ ಮಾಡಲಾಯಿತು.
ಮಾಧ್ಯಮಗಳ ಜತೆ ಮಾತನಾಡಿದ ರಮೇಶ್ ಗೌಡ ಅವರು; ದರ ಏರಿಕೆ ವಾಪಸ್ ಪಡೆಯುವಂತೆ ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಎರಡು ಸಲ ಮನವಿ ಸಲ್ಲಿಸಲಾಗಿದೆ. ಆದರೆ ಜನರ ಆಕ್ರೋಶ, ಭಾವನೆಗಳನ್ನು ಲೆಕ್ಕಿಸದೆ ನಮ್ಮ ಮನವಿಯನ್ನು ಕಡೆಗಣಿಸಿದ್ದಾರೆ. ಹೀಗಾಗಿ ಪ್ರತಿಭಟನೆ ನಡೆಸಿದ್ದೇವೆ. ತಕ್ಷಣವೇ ದರ ಏರಿಕೆ ವಾಪಸ್ ಪಡೆಯದಿದ್ದರೆ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರಕಾರ ನೀಡುತ್ತಿರುವ ಉಚಿತ ಕೊಡುಗೆಗಳಿಂದ ಆರ್ಥಿಕವಾಗಿ ದಿವಾಳಿಯಾಗಿದೆ. ಅಭಿವೃದ್ಧಿ ಕೆಲಸಗಳಿಗೆ ಖಜಾನೆಯಲ್ಲಿ ಹಣ ಇಲ್ಲ. ರಾಜ್ಯ ಸರಕಾರ ನೀಡುತ್ತಿರುವ ಚೆಕ್ ಗಳೇ ಬೌನ್ಸ್ ಆಗುತ್ತಿವೆ. ಅಲ್ಲಿಗೆ ಸರಕಾರದ ಆರ್ಥಿಕತೆ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ಗಮನಿಸಬಹುದು. ಈ ಮುಜುಗರದಿಂದ ಪಾರಾಗಲು, ಸಂಪನ್ಮೂಲ ಕ್ರೋಢೀಕರಣ ಮಾಡಲು ಜನರ ಮೇಲೆ ಮೇಲಿಂದ ಮೇಲೆ ಹೊರೆ ಹೇರಿಕೆ ಮಾಡುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ಈ ಸರಕಾರ ಬಂದ ಮೇಲೆ ೪೧,೩೬೦ ಕೋಟಿ ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ. ವಿದ್ಯುತ್, ಇಂಧನ, ಮುದ್ರಾಂಕ ಶುಲ್ಕ, ಮಾರ್ಗದರ್ಶಿ ಮೌಲ್ಯ ಹೆಚ್ಚಳ, ಬಸ್ ಪ್ರಯಾಣ ದರ ಏರಿಕೆ ಸೇರಿದಂತೆ ಅನೇಕ ರೀತಿಯಲ್ಲಿ ಸುಲಿಗೆ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!