ಉದಯವಾಹಿನಿ, ಹನುಮಸಾಗರ: ಸಾಹಿತ್ಯಕ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆ ಹೊಂದಿರುವ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಗಡಿಭಾಗ ಹನುಮಸಾಗರ ಸಮೀಪದ ಹೂಲಗೇರಾ ಗ್ರಾಮದಲ್ಲಿ ಈಗ ಕನ್ನಡದ ಕಲರವ ಮನೆಮಾಡಿದೆ. ಕನ್ನಡದ ನುಡಿತೇರು ಎಳೆಯುವ ಸಾಹಿತ್ಯದ ಹಬ್ಬವನ್ನು ಊರಿನ ಹಬ್ಬದಂತೆ ಸಂಭ್ರಮಿಸಲು ಗ್ರಾಮಸ್ಥರು ಹಾಗೂ ಸಾಹಿತ್ಯಪ್ರೇಮಿಗಳು ಕಾಯುತ್ತಿದ್ದಾರೆ.ಶನಿವಾರ ಹೂಲಗೇರಾ ಗ್ರಾಮದ ಎಂ.ಆರ್. ಪಾಟೀಲ್ ಮೈದಾನದಲ್ಲಿ 13ನೇ ಕುಷ್ಕಗಿ ತಾಲ್ಲೂಕು ಸಾಹಿತ್ಯ ಸಮ್ಮೇಳನ ಆಯೋಜನೆಯಾಗಿದ್ದು, ಹಿರಿಯ ಸಾಹಿತಿ ಹ.ಯ. ಈಟಿಯವರ್ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಮುಖ್ಯ ವೇದಿಕೆಗೆ ದಿ ವಾಸಪ್ಪ ಮಾಸ್ತರ್ ಮಹಾವೇದಿಕೆ ಹಾಗೂ ಸಭಾಮಂಟಪವನ್ನು ಹೂಲಗೇರಿಯ ದಿ ಶೇಖರಪ್ಪ ಬುದ್ದಿನ್ನಿ ಅವರ ಹೆಸರಿನಲ್ಲಿ ನಾಮಕರಣ ಮಾಡಲಾಗಿದೆ.
ಬೆಳಗ್ಗೆ 7.30ಕ್ಕೆ ಪರಿಷತ್ ಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಶಾಸಕ ದೊಡ್ಡನಗೌಡ ಪಾಟೀಲ್ ರಾಷ್ಟ್ರಧ್ವಜಾರೋಹಣ ಮತ್ತು ಕನ್ನಡ ಧ್ವಜವನ್ನು ಪರಿಷತ್ ತಾಲ್ಲೂಕು ಅಧ್ಯಕ್ಷ ಲೆಂಕಪ್ಪ ವಾಲಿಕಾರ ಧ್ವಜಾರೋಹಣ ಮಾಡುವರು. 8.30ಕ್ಕೆ ನಾಡದೇವತೆಯ ಭಾವಚಿತ್ರ ಮೆರವಣಿಗೆ ಗುಂಡಮಲ್ಲೇಶ್ವರ ದೇಗುಲದಿಂದ ಮುಖ್ಯ ವೇದಿಕೆ ತನಕ ನಡೆಯಲಿದೆ. ಮೆರವಣಿಗೆ ವೇಳೆ ಗ್ರಾಮೀಣ ಸೊಗಡಿನ ಕಲಾತ್ಮಕ ಎತ್ತಿನ ಬಂಡಿಗಳ ಸೊಬಗು ಕಂಡುಬರಲಿದೆ. ಕಲಾವಿದ ಶರಣಪ್ಪ ಗೋನಾಳ ಮತ್ತು ರಾಜ್ಯ ದಳಪತಿ ಕಾಶಿನಾಥ ಹಂದ್ರಾಳ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
