ಉದಯವಾಹಿನಿ, ಬೆಂಗಳೂರು: ಭಾರತೀಯ ವಾಯುಪಡೆಯ ಕಮಾಂಡ್ ಆಸ್ಪತ್ರೆಗೆ ಸೇರಿದ ಸ್ಥಳದಲ್ಲಿ ಹೊಸದಾಗಿ ಬಹುಮಹಡಿ ಮಾದರಿ ಆಸ್ಪತ್ರೆಯ ನಿರ್ಮಾಣಕ್ಕಾಗಿ ಹಾಗೂ ಬೆಂಗಳೂರು ಉಪನಗರ ರೈಲು ಯೋಜನೆ(ಬಿಎಸ್‌ಆರ್‌ಪಿ)ಗಾಗಿ ಸುಮಾರು ೨,೫೦೦ ಮರಗಳ ಕಡಿಯುವುದಕ್ಕಾಗಿ ಹೈಕೋರ್ಟ್ ನಿನ್ನೆ ಅನುಮತಿ ನೀಡಿದೆ.
ಕರ್ನಾಟಕ ಮರ ಕಡಿತಲೆ ನಿಷೇಧ ಕಾಯಿದೆಯಲ್ಲಿ ಇರುವ ಹಲವು ನಿಯಮಗಳನ್ನು ಸೂಕ್ತ ರೀತಿಯಲ್ಲಿ ಅನುಸರಿಸಲು ನಿರ್ದೇಶನ ನೀಡುವಂತೆ ಕೋರಿ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಮತ್ತು ದತ್ತಾ ತ್ರೇಯ ಟಿ ದೇವರು ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಪೀಠ, ಕಮಾಂಡ್ ಆಸ್ಪತ್ರೆಗಾಗಿ ಮರ ತಜ್ಞರ ಸಮಿತಿ(ಟಿಇಸಿ)ಯ ಶಿಫಾರಸಿನ ಮೇರೆಗೆ ೫೩೦ ಮರಗಳು ಮತ್ತು (ಬಿಎಸ್‌ಆರ್‌ಪಿ)ಗಾಗಿ ಅಂಬೇಡ್ಕರ್ ನಗರದಿಂದ ಮುದ್ದನಹಳ್ಳಿಯವರೆಗಿನ ಮಾರ್ಗದಲ್ಲಿ ೧೯೮೮ ಮರಗಳ ಕಡಿಯಲು ಅನುಮತಿಸಿತು. ಕಮಾಂಡ್ ಆಸ್ಪತ್ರೆಗಾಗಿ ೭೩೬ ಮರಗಳನ್ನು ಕಡಿಯಲು ಅನುಮತಿ ನೀಡುವಂತೆ ರಕ್ಷಣಾ ಎಸ್ಟೇಟ್ ಅಧಿಕಾರಿ ಅನುಮತಿ ಕೋರಿದ್ದರು. ಈ ಸಂಬಂಧ ಪರಿಶೀಲನೆ ನಡೆಸಿದ್ದ ಟಿಇಸಿ ೫೩೦ ಮರಗಳ ಕಡಿಯಲು ಅನುಮತಿ ನೀಡಿದೆ. ಎಂಟು ಮರಗಳನ್ನು ಸ್ಥಳಾಂತರಕ್ಕೆ ಶಿಫಾರಸು ಮಾಡಿದ್ದು ೨೧೧ ಮರಗಳ ಕಡಿಯಲು ಅನುಮತಿ ನೀಡಲು ನಿರಾಕರಿಸಿದೆ. ಟಿಇಸಿ ನೀಡಿದ ವರದಿಯಂತೆ ನ್ಯಾಯಪೀಠ ಆದೇಶಿಸಿದೆ. ಕಮಾಂಡ್ ಆಸ್ಪತ್ರೆಗೆ ೫೩೦ ಮರಗಳನ್ನು ಕಡಿಯುವುದಕ್ಕೆ ಪರ್ಯಾಯವಾಗಿ ಪ್ರತಿ ಮರಕ್ಕೂ ೧೦ರಂತೆ ಅಂದರೆ ೫,೩೦೦ ಗಿಡಗಳನ್ನು ನೆಡಬೇಕಾಗಿದೆ. ವಾಯುಪಡೆ ಜಾಗಗಳಾದ ಜಾಲಹಳ್ಳಿ ಮತ್ತು ಯಲಹಂಕದಲ್ಲಿ ಈಗಾಗಲೇ ಗಿಡಗಳನ್ನು ನೆಟ್ಟಿದೆ.
