ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧ ಕೇಳಿಬಂದ ಮುಡಾ ಪ್ರಕರಣದ ಅಂತಿಮ ವರದಿಯನ್ನು ಸಲ್ಲಿಕೆ ಮಾಡಲು ಲೋಕಾಯುಕ್ತ ಅಧಿಕಾರಿಗಳು ಸಮಯಾವಕಾಶ ಕೋರಿದ್ದಾರೆ. ಹೈಕೋರ್ಟ್‌ ಏಕಸದಸ್ಯ ಪೀಠದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಸೂಚನೆಯಂತೆ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಅವರು ನಾಲ್ಕು ದಿನಗಳ ಹಿಂದೆ ಲೋಕಾಯುಕ್ತ ಎಡಿಜಿಪಿ ಸುಬ್ರಹ್ಮಣೇಶ್ವರ ರಾವ್ ಅವರಿಗೆ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದ್ದರು.
ಈ ವರದಿಯನ್ನು ಲೋಕಾಯುಕ್ತ ಎಡಿಜಿಪಿ ಸುಬ್ರಹ್ಮಣೇಶ್ವರ ರಾವ್ ಅವರು ಅಧ್ಯಯನ ನಡೆಸಿದ್ದು, ಕೆಲವು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಅಂತಿಮ ವರದಿ ಸಲ್ಲಿಕೆಗೆ ಸಮಯ ಅವಕಾಶ ನೀಡಬೇಕೆಂದು ಬೆಂಗಳೂರು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗಜಾನನ ಭಟ್ ಅವರು ಸರ್ಕಾರದ ಪರ ವಕೀಲರು ಮಾಡಿದ ಮನವಿಯನ್ನು ಪುರಸ್ಕರಿಸಿ ಮುಂದಿನ ವಿಚಾರಣೆಯನ್ನು ಇದೇ ತಿಂಗಳ 24ಕ್ಕೆ ಮುಂದೂಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಕ್ರಮದ ಕುರಿತು ಬಹುತೇಕ ತನಿಖೆ ಪೂರ್ಣಗೊಳಿಸಿರುವ ಮೈಸೂರು ಲೋಕಾಯುಕ್ತ ಪೊಲೀಸರು, ವರದಿಯನ್ನು ಲೋಕಾಯುಕ್ತ ಐಜಿಪಿಗೆ ಸಲ್ಲಿಕೆ ಮಾಡಿದ್ದರು. ತನಿಖಾ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಅವರು ಪಡೆದಿರುವ 14 ಬದಲಿ ನಿವೇಶನ ಪ್ರಕ್ರಿಯೆಯಲ್ಲಿ ರಾಜಕೀಯ, ಅಧಿಕಾರ ಪ್ರಭಾವ ನಡೆದಿಲ್ಲ ಎಂಬುದರ ಬಗ್ಗೆ ಹೇಳಲಾಗಿತ್ತು. ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದ ತಂಡ ಇಡೀ ಹಗರಣದ ಕುರಿತು ಐದು ಪ್ರತ್ಯೇಕ ಸಂಪುಟಗಳಲ್ಲಿ 550 ಪುಟಗಳ ವರದಿಯನ್ನು ಐಜಿಪಿ ಸುಬ್ರಹ್ಮಣೇಶ್ವರ ರಾವ್ ಅವರಿಗೆ ಸಲ್ಲಿಕೆ ಮಾಡಿದೆ.
ವರದಿ ಸಲ್ಲಿಕೆ ಬಗ್ಗೆ ಖಚಿತಪಡಿಸಿರುವ ಲೋಕಾಯುಕ್ತ ಉನ್ನತ ಮೂಲಗಳು, ವರದಿ ಪರಿಶೀಲನೆ ಮಾಡಿ ಕಾನೂನು ಕೋಶ ಪರಾಮರ್ಶೆ ನಡೆಸಲಿದೆ. ಬಳಿಕವಷ್ಟೇ ಪ್ರಕರಣ ಚಾರ್ಜ್‌ ಶೀಟ್‌ ಗೆ ಯೋಗ್ಯವೋ ಅಥವಾ ಬಿ ರಿಪೋರ್ಟ್‌ಗೆ ಅರ್ಹವೋ ಎಂಬುದು ಸಷ್ಟವಾಗಲಿದೆ ಎಂದು ಮೂಲಗಳು ಹೇಳಿವೆ.

Leave a Reply

Your email address will not be published. Required fields are marked *

error: Content is protected !!