ಉದಯವಾಹಿನಿ, ಶ್ರವಣಬೆಳಗೊಳ: ಭಂಡಾರ ಬಸದಿಯ ಚವೀಸ ತೀರ್ಥಂಕರರ ಸನ್ನಿಧಿಯಲ್ಲಿ ನೂತನವಾಗಿ ಪ್ರತಿಷ್ಠಾಪನೆಗೊಂಡಿರುವ ಚಿಕ್ಕ ಬಾಹುಬಲಿಯ ಪ್ರಥಮ ಮಹಾಮಸ್ತಕಾಭಿಷೇಕವು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ, 108 ರಜತ ಮತ್ತು 108 ಸುವರ್ಣ ಕಲಶಗಳಿಂದ ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ನೆರವೇರಿತು. ಅಭಿಷೇಕ ನೆರವೇರುತ್ತಿದ್ದಂತೆಯೇ ಇತ್ತ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ‘ಬೆಳಗೊಳದ ಜನರಿಗೆ ಮಳೆ ಬಂದರಭಿಷೇಕ, ಗುಡುಗು ಮಿಂಚುಗಳ ಕೈತಾಳ, ಜಿನರಿಗೆ ಹೊಳೆವ ನಕ್ಷತ್ರಗಳ ಫಲ ಪುಂಜ’ ಇದು ಜನಪದರು ಬೆಳಗೊಳದ ಗೊಮ್ಮಟನಿಗೆ ನಿಸರ್ಗ ಮಾಡುವ ಅಭಿಷೇಕದ ವರ್ಣನೆಯನ್ನು ತಮ್ಮ ಜಾನಪದ ಶೈಲಿಯಲ್ಲಿ ಹೇಳಿದ್ದಾರೆ. ಅದರಂತೆ ಭಾನುವಾರ ಮಧ್ಯಾಹ್ನ ಸೌಂದರ್ಯದ ಖನಿಯಂತಿರುವ ಮಂದಸ್ಮಿತ ಚಿಕ್ಕ ಬಾಹುಬಲಿ ಮೂರ್ತಿಗೆ ನಡೆದ ಪ್ರಥಮ ಮಹಾಮಸ್ತಕಾಭಿಷೇಕವು ಕಣ್ಮನ ತುಂಬುವಂತಿದ್ದು, ಬಾಹುಬಲಿ ಮೂರ್ತಿ ವಿವಿಧ ಬಣ್ಣಗಳಿಂದ ಕಂಗೊಳಿಸಿತು.
ಪ್ರಥಮವಾಗಿ ಗುಳ್ಳುಕಾಯಜ್ಜಿಯ ಕಲಶ, ಚಾವುಂಡರಾಯ ಕಲಶಗಳಿಂದ ಜಲಾಭಿಷೇಕ ನಡೆಸಲು ಆಚಾರ್ಯರು ಚಾಲನೆ ನೀಡಿದರು. ನಂತರ ಕಾಶಿಯ ಗಂಗಾ ಜಲ, ಪ್ರಯಾಗರಾಜ್‌ನ ಸಂಗಮ ನದಿಗಳ ಜಲ, ಕೃಷ್ಣಾ, ಕಾವೇರಿ, ಗೋದಾವರಿ, ತುಂಗಾ, ಭದ್ರಾ ಮುಂತಾದ ನದಿಗಳಿಂದ ಸಂಗ್ರಹಿಸಿದ್ದ ಜಲದಿಂದ ಜಲಾಭಿಷೇಕಗಳು ನೆರವೇರಿದವು.ನಮ್ಮ ಆತ್ಮವೂ ಸಹ ಶುದ್ಧವಿರಲಿ ಎಂಬ ಭಾವನೆಯಿಂದ ನೈಸರ್ಗಿಕವಾಗಿ ಶುದ್ಧವಾಗಿರುವ ಎಳನೀರನ್ನು ಭಗವಂತನಿಗೆ ಅಭಿಷೇಕ ಮಾಡಲಾಯಿತು. ನಂತರ ಮೂರ್ತಿಗೆ ಕಬ್ಬಿನ ಹಾಲನ್ನು ಕೊಡಗಳಿಂದ ನೆತ್ತಿಯ ಮೇಲೆ ಹಾಕಿ ಅಭಿಷೇಕ ಮಾಡುವಾಗ ಭಗವಂತನು ಹಸಿರು ಬಣ್ಣಗಳಲ್ಲಿ ಕಂಗೊಳಿಸುತ್ತಿತ್ತು.
