ಉದಯವಾಹಿನಿ, ಉಡುಪಿ: ಯಕ್ಷಗಾನ ಮತ್ತು ಕಂಬಳವು ಕರಾವಳಿಯ ಎರಡು ಕಣ್ಣುಗಳಿದ್ದಂತೆ. ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಭಾನುವಾರ ಹೇಳಿದರು. ಪಾರ್ತಿಸುಬ್ಬ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಯಕ್ಷಗಾನ ಕಲೆಯ ಮಹತ್ವ ವನ್ನು ಮಕ್ಕಳ ಪೋಷಕರಿಗೆ ತಿಳಿಸಿ ಕೊಡುವ ಕೆಲಸವಾಗಬೇಕು.
ಅದರಿಂದ ಅವರು ತಮ್ಮ ಮಕ್ಕಳನ್ನು ಈ ಕ್ಷೇತ್ರಕ್ಕೆ ಕಳುಹಿಸುವ ಸಾಧ್ಯತೆ ಇದೆ. ಇಂದು ಪಾಶ್ಚಾತ್ಯ ಸಂಸ್ಕೃತಿ ಎಷ್ಟೇ ಬೆಳೆದರೂ ಕರಾವಳಿಯ ಸಂಸ್ಕೃತಿಯನ್ನು ಮೆಟ್ಟಿ ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು.
ಯಕ್ಷಗಾನ ಹಿಮ್ಮೇಳ ವಾದಕ ಬಂಟ್ವಾಳದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಯನ್ನು ಇಲ್ಲಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು. ಪ್ರಶಸ್ತಿ 1 ಲಕ್ಷ ನಗದು ಒಳಗೊಂಡಿದೆ.
ಯಕ್ಷಗಾನ ತೆಂಕುತಿಟ್ಟು ಕಲಾವಿದರಾದ ಬೆಳ್ತಂಗಡಿಯ ಕೊಳಿಗೆ ನಾರಾಯಣ ಗೌಡ, ಕಾಸರಗೋಡಿನ ಸುಬ್ರಾಯ ಹೊಳ್ಳ, ಬಡಗುತಿಟ್ಟು ಕಲಾವಿದ ಕುಂದಾಪುರದ ಕೋಡಿ ವಿಶ್ವನಾಥ ಗಾಣಿಗ, ಪ್ರಸಾಧನ ಕಲಾವಿದ ಬಂಟ್ವಾಳದ ರಾಘವ ದಾಸ್, ಮೂಡಲಪಾಯ ಯಕ್ಷಗಾನ ಕಲಾವಿದ ತುಮಕೂರಿನ ಕಾಂತರಾಜು ಅವರಿಗೆ 2024ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ ತಲಾ ₹50 ಸಾವಿರ ನಗದು ಒಳಗೊಂಡಿದೆ.

Leave a Reply

Your email address will not be published. Required fields are marked *

error: Content is protected !!