ಉದಯವಾಹಿನಿ, ಸೈದಾಪುರ: ಗಡಿಭಾಗದಲ್ಲಿರುವ ನಸಲವಾಯಿ ಗ್ರಾಮದ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಗ್ರಾಮಸ್ಥರು ಮೂಲಸೌಲಭ್ಯ, ನೈರ್ಮಲ್ಯದ ಕೊರತೆ, ಶುದ್ಧ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ತೊಂದರೆ ಅನುಭವಿಸುವಂತಾಗಿದೆ.ಅನಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಗಡಿಭಾಗದ ನಸಲವಾಯಿ ಗ್ರಾಮದಲ್ಲಿ ಸುಮಾರು 3 ಸಾವಿರದಿಂದ 4 ಸಾವಿರ ಜನಸಂಖ್ಯೆಯಿದೆ.
ಜನಸಂಖ್ಯೆಗೆ ಅನುಗುಣವಾಗಿ ಶುದ್ಧ ಕುಡಿಯುವ ನೀರು, ಸಿಸಿ ರಸ್ತೆ ಮತ್ತು ವೈಜ್ಞಾನಿಕ ಚರಂಡಿ ಸೇರಿದಂತೆ ಹಲವು ಸೌಲಭ್ಯಗಳು ಮರೀಚಿಕೆಯಾಗಿವೆ. ಗ್ರಾಮದ ಚರಂಡಿಗಳು ಕಸಕಡ್ಡಿಗಳಿಂದ ತುಂಬಿಕೊಂಡು, ಮನೆಬಳಕೆ ಹಾಗೂ ಅನುಪಯುಕ್ತ ನೀರು ಸರಾಗವಾಗಿ
ಹರಿದು ಹೋಗದೆ, ಅಲ್ಲಲ್ಲಿ ಸಂಗ್ರಹಗೊಂಡು ದುರ್ನಾತ ಬೀರುತ್ತಿದೆ. ನಿತ್ಯ ಶಾಲೆಗೆ ತೆರಳುವ ಮಕ್ಕಳು, ವೈದ್ಯರು, ರೋಗಿಗಳು, ಮಹಿಳೆಯರು, ನಿತ್ಯದ
ವಹಿವಾಟಿಗೆ ಯಾದಗಿರಿ, ಸೈದಾಪುರ, ಪಕ್ಕದ ನಾರಾಯಣಪೇಠ ಪಟ್ಟಣಗಳಿಗೆ ಹೋಗಲು ಹಾಗೂ ರೈತರು ತಮ್ಮ ಹೊಲಗದ್ದೆಗಳಲ್ಲಿನ ಕೃಷಿ ಚಟುವಟಿಕೆಗಳಿಗಾಗಿ ಗ್ರಾಮದಲ್ಲಿರುವ ಆಂಜನೇಯ ದೇವಸ್ಥಾನದ ರಸ್ತೆ ಮೂಲಕವೇ ಹೋಗಬೇಕು. ಆದರೆ ಈ ರಸ್ತೆ ಪಕ್ಕದಲ್ಲಿಯೇ ಇರುವ ಚರಂಡಿಯ ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತಿದ್ದು, ಜನರು ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ.
