ಉದಯವಾಹಿನಿ, ಬೀದರ್: ‘ಮೈಕ್ರೋ ಫೈನಾನ್ಸ್‌ಗಳು ಸಾಲ ಕೊಡುವುದಕ್ಕೂ ಮುನ್ನ ಅವರ ಆದಾಯ ನೋಡಬೇಕು. ಪೂರ್ವಾಪರ ಪರಿಶೀಲಿಸಬೇಕು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಜಿಲ್ಲೆಯ ಎಲ್ಲ ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕರೊಂದಿಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫೈನಾನ್ಸ್‌ಗಳು, ಲೇವಾದೇವಿ ವ್ಯಾಪಾರಸ್ಥರು, ಮೈಕ್ರೋ ಫೈನಾನ್ಸ್ ಹಣಕಾಸು ಸಂಸ್ಥೆಗಳು, ಭಾರತೀಯ ರಿಸರ್ವ್ ಬ್ಯಾಂಕ್ ನೀಡುವ ಮಾರ್ಗದರ್ಶನ ಹಾಗೂ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಹೇಳಿದರು.
ಆದಾಯದ ಶೇ. 50ರಷ್ಟು ಮಾತ್ರ ಸಾಲ ನೀಡಬೇಕು. ಆದರೆ, ಅವರ ಸಾಲ ಮರು ಪಾವತಿಸುವ ಸಾಮರ್ಥ್ಯ ನೋಡದೇ ಸಾಲವನ್ನು ನೀಡಿರುವುದು ಕಂಡು ಬಂದಿದೆ. ಇದೆಲ್ಲ ಆಗಬಾರದು ಸಾಲ ನೀಡುವವರು ಹಾಗೂ ತೆಗೆದುಕೊಳ್ಳುವವರು ಇಬ್ಬರೂ ಸಹ ಆರ್ಥಿಕ ಶಿಸ್ತು ಪಾಲಿಸಬೇಕು ಎಂದು ನಿರ್ದೇಶನ ನೀಡಿದರು.
ಆರ್‌ಬಿಐ ಮಾರ್ಗಸೂಚಿಯ ಪ್ರಕಾರ ಮೈಕ್ರೋ ಫೈನಾನ್ಸ್‌ಗಳು 3 ಲಕ್ಷದವರೆಗೆ ಮಾತ್ರ ಸಾಲ ನೀಡಲು ಅವಕಾಶವಿದೆ. ಸಾಲ ಮರುಪಾವತಿಗೆ ಕಾನೂನಿನ ಅನ್ವಯ ಕ್ರಮಗಳನ್ನು ಕೈಗೊಳ್ಳಬೇಕು. ಕಾನೂನು ಉಲ್ಲಂಘಿಸಿ, ದೌರ್ಜನ್ಯ ಎಸಗಿ, ಕೆಟ್ಟ ಪದಗಳಲ್ಲಿ ನಿಂದಿಸಿ ಕಿರುಕುಳ ಕೊಟ್ಟರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ 1.79 ಲಕ್ಷ ಜನರಿಗೆ ಸುಮಾರು ₹1,193 ಕೋಟಿ ಸಾಲ ನೀಡಲಾಗಿದೆ ಎಂದು ಎಂಎಫ್‌ಐಎನ್ ರಾಜ್ಯ ಸಂಯೋಜಕ ಮಂಜುನಾಥ ಎಸ್. ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಾತನಾಡಿ, ಮೈಕ್ಕೂ ಫೈನಾನ್ಸ್‌ಗಳಲ್ಲಿ ತೆಗೆದುಕೊಳ್ಳುವ ಸಾಲ, ವ್ಯವಹಾರಗಳು ಶಾಂತಿಯುತವಾಗಿ ಆಗಬೇಕು. ಸಾಲ ವಸೂಲಾತಿಗಾಗಿ ಫೈನಾನ್ಸ್ ಕಂಪನಿಗಳು ಬೆಳಿಗೆ, 9ಕ್ಕೂ ಮುನ್ನ ಸಂಜೆ 5ರ ನಂತರ ಸಾಲಗಾರರ ಮನೆಗೆ ಹೋಗಬಾರದು. ಯಾವುದೇ ರೀತಿಯ ದೌರ್ಜನ್ಯ ನಡೆಸಬಾರದು.
ಒಂದೊಮ್ಮೆ ಉಲ್ಲಂಘಿಸಿದಲ್ಲಿ ಅಂತಹವರ ಮೇಲೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಜಿಲ್ಲೆಯ ಎಲ್ಲ ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕರು ಪಾಲ್ಗೊಂಡಿದ್ದರು.
