ಉದಯವಾಹಿನಿ ಬೆಳಗಾವಿ: ಮನೆಯೊಂದರಲ್ಲಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ಆಕೆಯ ಸೊಸೆ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದ್ದು, ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಸೊಸೆ ಮತ್ತು ಆಕೆಯ ಕುಟುಂಬಸ್ಥರ ವಿರುದ್ಧ ದೂರು ಕೂಡ ದಾಖಲಾಗಿದೆ.ಬೆಳಗಾವಿಯ ಬೈಲಹೊಂಗಲ ನಿವಾಸಿ ಮಹಾಬೂಬಿ ಯಾಕೂಶಿ (53) ಸಾವಿಗೀಡಾದ ಮಹಿಳೆ. ಸೊಸೆ ಮೆಹರೂಣಿ ಮತ್ತು ಆಕೆಯ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ದೂರು ದಾಖಲಾಗಿದೆ. ಯಾಕೂಶಿ ಪುತ್ರ ಸುಬಾನ್ ಮತ್ತು ಮೆಹರೂಣಿ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.ಮದುವೆ ಬಳಿಕ ಬೇರೆ ಮನೆ ಮಾಡುವಂತೆ ಗಂಡ ಸುಬಾನ್ಗೆ ಮೆಹರೂಣಿ ಕಿರುಕುಳ ನೀಡುತ್ತಿದ್ದಳು ಎನ್ನಲಾಗಿದೆ. ಬೇರೆ ಮನೆ ಮಾಡಲು ಗಂಡನ ಮನೆಯವರು ನಿರಾಕರಿಸಿದ್ದಕ್ಕೆ ಸೊಸೆ ತನ್ನ ಕುಟುಂಬಸ್ಥರನ್ನು ಕರೆಸಿ ಅತ್ತೆ ಹಾಗೂ ಪತಿ ಮೇಲೆ ಹಲ್ಲೆ ಮಾಡಿಸಿದ್ದು, ಅತ್ತೆ ಗಾಯಗೊಂಡಿದ್ದರು.ಗಾಯಗೊಂಡಿದ್ದ ಮಹಾಬೂಬಿಯನ್ನು ಮೇ 22ರಂದು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೂನ್ 1ರಂದು ಆಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆ ಬಳಿಕ ಮಹಾಬೂಬಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ, ಆಕೆ ಕೊನೆಯುಸಿರೆಳೆದಿದ್ದು, ಲೋ ಬಿಪಿ ಇಲ್ಲವೇ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಸೊಸೆ ಮತ್ತು ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ದೂರು ದಾಖಲಾಗಿದ್ದು, ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
