ಉದಯವಾಹಿನಿ ಬೆಂಗಳೂರು: ಡಾ.ರಾಜ್ ಕಪ್ ಸೀಸನ್-6ಕ್ಕೆ ಮುಹೂರ್ತ ನಿಗದಿಯಾಗಿದ್ದು, ಇದಕ್ಕಾಗಿ ತಾರೆಯರು ತಯಾರಿ ಆರಂಭಿಸಿದ್ದಾರೆ. ಇದೇ ಜೂನ್ 17ರಂದು ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಅವರು ವಿಶೇಷ ಅತಿಥಿಯಾಗಿ ಭಾಗಿಯಾಗಲಿದ್ದಾರೆ.ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ನಡೆದ ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ರಾಜೇಶ್ ಬ್ರಹ್ಮಾವರ, ಅನಿರುದ್ಧ್, ಮಣಿಕಾಂತ್ ಕದ್ರಿ, ಸಿಂಪಲ್ ಸುನಿ, ರವಿಶಂಕರ್ ಗೌಡ, ಜೇಮ್ಸ್ ಚೇತನ್, ಪವನ್ ಒಡೆಯರ್ ಸೇರಿದಂತೆ ಅನೇಕರು ಪಾಲ್ಗೊಂಡು ವಿವರ ತಿಳಿಸಿದರು.ಇದೇ 17ರಂದು ದುಬೈನಲ್ಲಿ ರಾಜ್ ಕಪ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಕಳೆದ ಬಾರಿ 8 ತಂಡಗಳಿದ್ದು, ಈ ಬಾರಿ 12 ತಂಡಗಳಾಗಿವೆ. ಒಂದು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅವುಗಳಲ್ಲಿ ನಿಯಮಗಳಿಗೆ ತಕ್ಕಂತೆ ಆಯ್ಕೆ ಮಾಡಲಾಗಿದೆ. 12 ತಂಡಗಳಿಗೆ 12 ಕ್ಯಾಪ್ಟನ್, 12 ವೈಸ್ ಕ್ಯಾಪ್ಟನ್, ಸ್ಟಾರ್ ಕ್ಯಾಪ್ಟನ್ ಇರಲಿದ್ದಾರೆ ಎಂದು ರಾಜ್ ಕಪ್ ಆಯೋಜಕ ರಾಜೇಶ್ ಬ್ರಹ್ಮಾವರ್ತಿಳಿಸಿದರು.ರಾಜ್ ಕಪ್ ಸೀಸನ್-6 ಆರು ದೇಶಗಳಲ್ಲಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಶ್ರೀಲಂಕಾ, ಸಿಂಗಾಪುರ, ಮಲೇಷ್ಯಾ, ಬ್ಯಾಂಕಾಕ್ ಮತ್ತು ದುಬೈನಲ್ಲಿ ಪಂದ್ಯಗಳು ನಡೆಯಲಿವೆ. ಇನ್ನೊಂದು ದೇಶದ ಆಯ್ಕೆ ಬಾಕಿ ಉಳಿದಿದೆ. ದುಬೈನಲ್ಲಿ ನಡೆಯುವ ಆಟಗಾರರ ಹರಾಜಿನಲ್ಲಿ ಮುಖ್ಯ ಅತಿಥಿಯಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಭಾಗಿಯಾಗಲಿದ್ದಾರೆ ಎಂದು ರಾಜೇಶ್ ತಿಳಿಸಿದರು.
