ಉದಯವಾಹಿನಿ, ಕಲಬುರಗಿ: ಪಿಯುಸಿ ಪರೀಕ್ಷೆಯ ವೇಳೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅನುಮತಿ ನೀಡಲು ಸಾಂವಿಧಾನಿಕ ಅಂಶಗಳನ್ನು ಪರಿಶೀಲನೆ ನಡೆಸುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಂಘಟನೆಗಳು ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಿರುವುದನ್ನು ಪರಿಶೀಲನೆ ನಡೆಸಲಾಗುವುದು, ಕಾನೂನಾತಕವಾಗಿ ಯಾವ ಸಾಧ್ಯತೆಗಳಿವೆ, ಸಂವಿಧಾನದಲ್ಲಿ ಯಾವೆಲ್ಲಾ ಅವಕಾಶಗಳಿವೆ ಎಂಬುದನ್ನು ಪರಾಮರ್ಶಿಸಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ರಂಜಾನ್‌ನ ಅವಧಿಯಲ್ಲಿ ಇಫ್ತಿಯಾರ್‌ನಲ್ಲಿ ಭಾಗವಹಿಸಲು ಮುಸ್ಲಿಂ ಸರ್ಕಾರಿ ನೌಕರರಿಗೆ ಸಮಯದ ವಿನಾಯಿತಿ ನೀಡಬೇಕು ಎಂಬ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಹೇಳಿದರು.ಪರಿಶಿಷ್ಟ ಪಂಗಡದ ಕೆಲ ಜಾತಿಗಳಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ತಳಿ ಶಾಸ್ತ್ರ ಅಧ್ಯಯನ ಆಧರಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟಿಲ್ಲ. ಪಂಚಖಾತ್ರಿ ಯೋಜನೆಗಳು ಅಬಾಧಿತವಾಗಿ ಮುಂದುವರೆಯುತ್ತವೆ. ರಾಜಕೀಯ ಪಕ್ಷಗಳಲ್ಲಿ ಜಾತಿವಾರು ಸಮಾವೇಶಗಳು ನಿರಂತರ. ಕಾಂಗ್ರೆಸ್‌ನಲ್ಲಿ ದಲಿತರ ಸಭೆ ಮಾಡಬೇಡಿ ಎಂದು ಹೈಕಮಾಂಡ್ ಹೇಳಿಲ್ಲ. ಸಮಸ್ಯೆಗಳಿರುವವರೆಗೂ ಈ ರೀತಿಯ ಸಭೆ ಸಮಾರಂಭಗಳು ನಿರಂತರವಾಗಿ ನಡೆಯುತ್ತವೆ ಎಂದು ಹೇಳಿದರು. ನಾನು ಹೇಳಿದ ತಕ್ಷಣ ನಾಯಕತ್ವ ಬದಲಾವಣೆಯಾಗುವುದಿಲ್ಲ. ದೇವರಾಜ ಅರಸು ಹೆಚ್ಚುಕಾಲ ಮುಖ್ಯಮಂತ್ರಿಯಾಗಿದ್ದರು ಎಂಬ ದಾಖಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುರಿಯಲಿದ್ದಾರೆ. ಹೈಕಮಾಂಡ್ ಈಗಾಗಲೇ ನಾಯಕತ್ವದ ಬಗ್ಗೆ ನಿರ್ಧಾರ ತೆಗೆದುಕೊಂಡರೆ ಅದರಲ್ಲಿ ಬದಲಾವಣೆಯ ಸಾಧ್ಯತೆ ಇಲ್ಲ ಎಂದರು.
