ಉದಯವಾಹಿನಿ, ಮುಳಗುಂದ: ಶರಣ ಸಂಸ್ಕೃತಿ, ಐತಿಹಾಸಿಕ ಪರಂಪರೆ, ಸಾಹಿತ್ಯ ಸಂಗೀತ ಹಲವು ಕ್ಷೇತ್ರಗಳ ತವರೆನಿಸಿದ ಆಧ್ಯಾತ್ಮಿಕ ಪರಂಪರೆಯ ತಾಣವಾಗಿದೆ ನೀಲಗುಂದ ಗ್ರಾಮ, ಇಲ್ಲಿನ ಗುದ್ದೇಶ್ವರ ಮಠದಲ್ಲಿ ಮಹಾಶಿವರಾತ್ರಿ ಉತ್ಸವದ ನಿಮಿತ್ತ ಫೆ. 26 ರಂದು ಆಧ್ಯಾತ್ಮಿಕ, ಸಾಹಿತ್ಯಕ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಬೆಳ್ಕೊಲ-300 ಮುಳಗುಂದ-12 ಕ್ಕೆ ಸೇರಿತ್ತು ಎನ್ನಲಾದ ನೀಲಗುಂದ ರಾಷ್ಟ್ರಕೂಟರ ಕಾಲದಿಂದಲೂ ಇದೊಂದು ರಾಜಕೀಯ ನೆಲೆಯಾಗಿತ್ತು ಎನ್ನುವುದು ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಾಗಿದೆ.
‘ಇಲ್ಲಿನ ಕಲ್ಲು ಬಂಡೆ ಗುಡ್ಡದಲ್ಲಿ ಪಾಂಡವರು ಹಲವು ದಿನಗಳ ಕಾಲ ಅಜ್ಞಾತವಾಸ ಕಳೆದರು. ಪಾಂಡವರ ಅಜ್ಞಾತ ಸಂದರ್ಭದಲ್ಲಿ ಈ ಗುಡ್ಡದಲ್ಲಿ ತ್ರಿಲಿಂಗೇಶ್ವರ ಪ್ರತಿಷ್ಠಾಪಿಸಲ್ಪಟ್ಟಿದೆ’ ಎಂಬ ಪ್ರತೀತಿಯೂ ಇದೆ. ಗುಡ್ಡದಲ್ಲಿ ಪಾಂಡವರು ಪಗಡೆ ಆಡಿದ್ದಾರೆ ಎನ್ನಲಾದ ಕುರುಹಿನ ಸ್ಥಳ, ಖಾರದ ಕಲ್ಲು, ಗಂಗಾಳ ಕಲ್ಲು, ಭೀಮನ ಬಂಡೆ ಹಾಗೂ ಗುಡ್ಡದಲ್ಲಿ ಬಸವಣ್ಣನ ಮೂರ್ತಿಗಳು ಇವೆ.
ಇಲ್ಲಿನ ಗುಹೆ ಒಳಗಿನ ಎರಡು ಕಲ್ಲು ಬಂಡೆಗಳ ಮಧ್ಯ ದೇವಿಯ ಮೂರ್ತಿ ಒಡ ಮೂಡಿರುವುದು ವಿಸ್ಮಯಕಾರಿಯಾಗಿದೆ. ಒಂದೇ ಪಾನ ಬಟ್ಟಲದಲ್ಲಿಯ ತ್ರಿಲಿಂಗೇಶ್ವರ ಲಿಂಗ ಇರುವ ಬೆಟ್ಟದ ಮೇಲಿನ ಮಲ್ಲಿಕಾರ್ಜುನ ದೇವಸ್ಥಾನ ಗ್ರಾಮದ ಭಕ್ತರ ಆರಾಧ್ಯ ದೈವ. ಜಾಗೃತ ಮೂರ್ತಿಯಾದ ಶಿವಲಿಂಗಕ್ಕೆ ಶಿವರಾತ್ರಿ ದಿನ ಅಭಿಷೇಕ ಪೂಜೆಗಳು ವಿಶೇಷವಾಗಿ ನಡೆಯಲಿವೆ.
