ಉದಯವಾಹಿನಿ, ಬೆಂಗಳೂರು: ಪ್ರವಾಸೋದ್ಯಮದಲ್ಲಿನ ಭವಿಷ್ಯದ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಪ್ರವಾಸೋದ್ಯಮ ಪಾಲಿಸಿ ೨೦೨೪-೨೦೨೯ ಜಾರಿಗೆ ತರಲಾಗುತ್ತಿದೆ. ೧.೫ ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಪಾಲಿಸಿ ಜಾರಿಗೆ ತರಲಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಗಾಗಿ ಸಾವಿರ ಕೋಟಿಗಿಂತ ಹೆಚ್ಚಿನ ಅನುದಾನ ಒದಗಿಸಲು ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ನಗರದ ಖಾಸಗಿ ಹೋಟೆಲ್ ತಾಜ್ ವೆಸ್ಟ್ ಎಂಡ್ ನಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಮ್ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಎರಡನೇ ಆವೃತ್ತಿಯ “ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ-೨೦೨೫” ಸಮಾವೇಶ ವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ರವಾಸೋದ್ಯಮದಲ್ಲಿ ಜಾಗತಿಕವಾಗಿ ಕರ್ನಾಟಕ ಗುರುತಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ ಎಂದರು.
ಕರ್ನಾಟಕವನ್ನು ಪ್ರವಾಸೋದ್ಯಮದಲ್ಲಿ ಜಾಗತಿಕವಾಗಿ ಗುರುತಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿವಿಧತೆಯಲ್ಲಿ ಏಕತೆ ಎಂಬಂತೆ ರಾಜ್ಯ ಎಲ್ಲಾ ರೀತಿಯ ಪ್ರವಾಸಿ ತಾಣಗಳನ್ನು ಹೊಂದಿದೆ, ಹಲವು ಜಗತ್ತು ಒಂದು ರಾಜ್ಯ ನಮ್ಮದು ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
ಕರ್ನಾಟಕದ ಕಾಡುಗಳು, ಐತಿಹಾಸಿಕ ತಾಣಗಳು, ಸಂಸ್ಕೃತಿ, ಕಲೆ, ಜನಪದ ಹೀಗೆ ರಾಜ್ಯದ ಪ್ರತಿಮೂಲೆ ಸಹ ಪ್ರವಾಸಿ ತಾಣವಾಗಿದೆ. ವಿಮಾನಯಾನ, ರಸ್ತೆ, ರೈಲು ಸೇರಿದಂತೆ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಪ್ರವಾಸಿತಾಣಗಳ ಅಭಿವೃದ್ಧಿಗಾಗಿ ಕ್ರಮಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!