ಉದಯವಾಹಿನಿ, ಕೋಲಾರ : ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಸರ್ಕಾರ ಜನಪರ ಉತ್ಸವದಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹಿಸುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್. ಸುರೇಶ್ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ, ರಾಜ್ಯ ಮಟ್ಟದ ಜನಪರ ಉತ್ಸವ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್. ಸುರೇಶ್ ಅವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.
ಜಾನಪದ ಕಲೆಯು ಗ್ರಾಮೀಣ ಭಾಗದ ಬಡವರು ಹಿಂದುಳಿದವರು ಹಾಗೂ ದಲಿತರಲ್ಲಿ ಉಳಿದಿದೆ. ಆಗಾಗಿ ಈ ಕಲೆಯನ್ನು ತಮ್ಮ ಯುವ ಪೀಳಿಗೆಗೆ ಮುಂದುವರಿಸಿಕೊಂಡು ಹೋಗಲು, ಅವರಿಗೂ ಕಲಿಸಬೇಕು. ಇಂದಿನ ಕಲೆಗಳಲ್ಲಿ ಯಾವುದೇ ಸಂಸ್ಕೃತಿ ಉಳಿದಿಲ್ಲ. ಹಿಂದೆ ನಮ್ಮ ಹಿರಿಯರು ನಮಗೆ ಹಲವಾರು ಜಾನಪದ ಹಾಡುಗಳನ್ನು ಕಲಿಸುತ್ತಿದ್ದರು. ಹಳ್ಳಿಗಳಲ್ಲಿ ನಾಟಕ, ಕೋಲಾಟ, ಭಜನೆ ಪದಗಳನ್ನು ಕುಳಿತು ಕೇಳಬಹುದಾಗಿತ್ತು. ಈಗ ಇಂತಹ ಕಲೆಗಳು ನಶಿಸುತ್ತಿದ್ದು, ಕಲವಿದರಾದ ತಾವು ಇವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರು.
ಸಮ ಸಮಾಜ ನಿರ್ಮಾಣ: ಕರ್ನಾಟಕ ಸರ್ಕಾರದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಸಮಾಜದಲ್ಲಿರುವ ಎಲ್ಲರೂ ಸಮಾನರು ಎಂಬ ಸಮಸಾಮಾಜ ನಿರ್ಮಾಣದ ದೃಷ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಈ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ತಿಳಿಸಿದರು. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಿಂದಲೇ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮೀಸಲಾತಿಯನ್ನು ಪಡೆದುಕೊಂಡು ಕೆಳ ಮಟ್ಟದ ಸಮುದಾಯಗಳು ಮುನ್ನಡೆಯುತ್ತಿದೆ. ಮಹಿಳಾ ಶಕ್ತಿಯೇ ದೇಶದ ಶಕ್ತಿ ಅದನ್ನು ಅಂಬೇಡ್ಕರ್ ಅವರು ತಮ್ಮ ಸಂವಿಧಾನದಲ್ಲಿ ಬರೆದು ಕೊಡುಗೆಯಾಗಿ ನೀಡಿದ್ದಾರೆ ನಾವು ದೇವರನ್ನು ಕಾಣದೆ ಇರಬಹುದು ಆದರೆ ನಮಗೆ ಕಾಣದೆ ಇರುವ ದೇವರು ಅಂಬೇಡ್ಕರ್ ಅದನ್ನು ನಾವು ಕೇವಲ ಬಾಯಿಂದ ಹೇಳುವುದಲ್ಲ ತಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಳ್ಳಬೇಕು ಅಂಬೇಡ್ಕರ್ ಅವರ ಚಿಂತನೆಗಳನ್ನು ನಮ್ಮೆಲ್ಲರ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
