ಉದಯವಾಹಿನಿ, ಹಾಸನ: ಕಾಡಾನೆಗಳ ಹಾವಳಿ ಜಿಲ್ಲೆಯಲ್ಲಿ ಮಿತಿ ಮೀರುತ್ತಿದ್ದು, ಜನರು ಮನೆಗಳಿಂದ ಹೊರಗೆ ಬರುವುದಕ್ಕೂ ಹಿಂದೇಟು ಹಾಕುವಂತಾಗಿದೆ. ಕಾಡಾನೆ ದಾಳಿಗೆ ಎರಡು ತಿಂಗಳಲ್ಲಿಯೇ ಮೂವರು ಮೃತಪಟ್ಟಿದ್ದು.
ಅರಣ್ಯ ಇಲಾಖೆಯ ವಿರುದ್ಧ ಜನರು ಹಾಗೂ ಜನಪ್ರತಿನಿಧಿಗಳ ಆಕ್ರೋಶ ಮಡುಗಟ್ಟಿದೆ. ಪ್ರಮುಖವಾಗಿ ಬೇಲೂರು ತಾಲ್ಲೂಕಿನಲ್ಲಿಯೇ ಹೆಚ್ಚಿನ ಉಪಟಳ ಶುರುವಾಗಿದೆ. ಬಿಕ್ಕೋಡು ಭಾಗದಲ್ಲಿ ಹಿಂಡುಹಿಂಡಾಗಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು, ಎಲ್ಲೆಂದರಲ್ಲಿ ದಾಳಿ ನಡೆಸುತ್ತಿವೆ. ಬೆಳೆ ನಾಶ ಒಂದೆಡೆಯಾದರೆ, ಒಂಟಿಯಾಗಿ ಓಡಾಡುವ ಜನರ ಮೇಲೆ ದಾಳಿ ಮಾಡುತ್ತಿವೆ. ಆನೆಗಳ ದಾಳಿಯಿಂದ ರೋಸಿ ಹೋಗಿರುವ ಮಲೆನಾಡು ಭಾಗದ ಜನರು, ಅರಣ್ಯ ಇಲಾಖೆ ವಿರುದ್ಧ ರೊಚ್ಚಿಗೇಳುತ್ತಿದ್ದಾರೆ. ಬೇಲೂರು ಶಾಸಕ ಎಚ್.ಕೆ. ಸುರೇಶ್, ಸಕಲೇಶಪುರ-ಆಲೂರು ಶಾಸಕ ಸಿಮೆಂಟ್ ಮಂಜು ಕೂಡ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೆ ಸೆರೆಗೆ ಪ್ರಸ್ತಾವ: ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆಯೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಮಲೆನಾಡು ಸೇರಿದಂತೆ ಜಿಲ್ಲೆಯಲ್ಲಿ ವಿವಿಧೆಡೆ ಮಿತಿ ಮೀರಿರುವ ಕಾಡಾನೆ ಹಾವಳಿಗೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಮುಂದಾಗಿದೆ. ಉಪಟಳ ನೀಡುತ್ತಿರುವ 4 ಪುಂಡಾನೆಗಳ ಸೆರೆಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದ್ದು, ಅಮಾಯಕರನ್ನು ಬಲಿ ಪಡೆಯುತ್ತಿರುವ 4 ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
