
ಉದಯವಾಹಿನಿ, ಢಾಕಾ : ಬಾಂಗ್ಲಾದೇಶದಲ್ಲಿ ಹಿಂದೂಗಳ ಸರಣಿ ಹತ್ಯೆ ಮುಂದುವರಿದೆ ಇಂಧನ ಹಾಕಿಸಿ ಹಣ ಕೊಡದಿರುವುದನ್ನು ಪ್ರಶ್ನಿಸಿದ ಪೆಟ್ರೋಲ್ ಬಂಕ್‌ನ ಹಿಂದೂ ಸಿಬ್ಬಂದಿಯ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ ಶುಕ್ರವಾರ (ಜನವರಿ 16) ಘಟನೆ ನಡೆದಿದ್ದು, ಆ ದೇಶದ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ಬಾಂಗ್ಲಾದೇಶದ ರಾಜ್‌ಬರಿ ಜಿಲ್ಲೆಯಲ್ಲಿ ಹಿಂದೂ ಯುವಕನನ್ನು ಹತ್ಯೆ ಮಾಡಲಾಗಿದ್ದು, ಮೃತನನ್ನು 30 ವರ್ಷದ ರಿಪನ್ ಸಹಾ ಎಂದು ಗುರುತಿಸಲಾಗಿದೆ. ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಸದರ್ ಉಪಝಿಲ್ಲಾ ಪೆಟ್ರೋಲ್ ಬಂಕ್‌ನ ಉದ್ಯೋಗಿಯಾಗಿದ್ದ ಸಹಾ ಮೇಲೆ ಶುಕ್ರವಾರ ಕಾರು ಹತ್ತಿಸಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಸ್ಥಳೀಯ ನಾಯಕ ಅಬುಲ್ ಹಶೀಮ್ ಮತ್ತು ಆತನ ಚಾಲಕ ಕಮಲ್ ಹೊಸೈನ್ ಕೊಲೆಗಾರರು ಎಂದು ಗುರುತಿಸಲಾಗಿದ್ದು, ಸದ್ಯ ಬಂಧನಕ್ಕೊಳಗಾಗಿದ್ದಾರೆ.
ಪೊಲೀಸ್ ವರದಿಯ ಪ್ರಕಾರ, ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಮತ್ತು ಅದರ ವಿದ್ಯಾರ್ಥಿ ಘಟಕ ಜುಡೊ ದಳದ ಮಾಜಿ ನಾಯಕ ಅಬುಲ್ ಹಶೀಮ್ ಶುಕ್ರವಾರ ಪೆಟ್ರೋಲ್ ಬಂಕ್‌ಗೆ ಆಗಮಿಸಿ ತನ್ನ ಕಪ್ಪು ಲ್ಯಾಂಡ್ ಕ್ರೂಸರ್ ಕಾರ್ ಟ್ಯಾಂಕ್ ತುಂಬಿಸಿದ್ದಾನೆ. ಬಳಿಕ ಹಣ ಪಾವತಿಸದೆ ಬಂಕ್‌ನಿಂದ ಹೊರ ಹೋಗಲು ಯತ್ನಿಸಿದ್ದಾನೆ. ಈ ವೇಳೆ ರಿಪನ್ ಸಹಾ ವಾಹನದ ಮುಂದೆ ಹೋಗಿ ಹಣ ಕೇಳಿದರು. ಹಶೀಮ್ ಈ ವೇಳೆ ಚಾಲಕ ಕಮಲ್ ಹೊಸೈನ್‌ಗೆ ಕಾರು ನಿಲ್ಲಿಸದೇ ಇರಲು ಸೂಚಿಸಿ ಸಹಾ ಮೇಲೆ ಹರಿಸಲು ಸೂಚಿಸಿದ್ದಾನೆ. ಇದರಿಂದ ಸಹಾ ಗಂಭೀರ ಗಾಯಗೊಂಡು ನೆಲಕ್ಕೆ ಉರುಳಿದರು. ಸಹಾ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದರೂ ಅಪರಾಧಿಗಳು ಸ್ಥಳದಿಂದ ಪರಾರಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ʼʼಹಣ ಪಾವತಿ ಮಾಡದ್ದನ್ನು ಪ್ರಶ್ನಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿಯ ಮೇಲೆ ಉದ್ದೇಶಪೂರ್ವ ಕಾರನ್ನು ಹತ್ತಿಸಲಾಗಿದೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
