ಉದಯವಾಹಿನಿ, ಭಾಲ್ಕಿ: ತಾಲ್ಲೂಕಿನ ಶಿವಣಿ ಗ್ರಾಮದಲ್ಲಿ ಹನ್ನೊಂದು ದಿನಗಳ ಹಾವಗಿ ಸ್ವಾಮಿ ಜಾತ್ರೆ ಹಾಗೂ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಆರಂಭಗೊಂಡಿತು.ಮಠದಲ್ಲಿ ಸಂಜೆ ನಡೆದ ಸಮಾರಂಭದಲ್ಲಿ ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಚಾಲನೆ ನೀಡಿದರು. ಸುಂದರ ಜೀವನಕ್ಕೆ ಪ್ರತಿಯೊಬ್ಬರೂ ಬಸವಣ್ಣನವರ ಸಪ್ತ ಸೂತ್ರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ’ ಎಂಬ ಸೂತ್ರಗಳೇ ಸಪ್ತಸೂತ್ರಗಳು ಇವುಗಳನ್ನು ಪಾಲಿಸಿದ್ದಲ್ಲಿ ಅಂತರಂಗ, ಬಹಿರಂಗ ಎರಡೂ ಶುದ್ಧವಾಗಿರುತ್ತವೆ ಎಂದು ತಿಳಿಸಿದರು. ಸಾನಿಧ್ಯ ವಹಿಸಿದ್ದ ಮಠದ ಪೀಠಾಧಿಪತಿ ಹಾನಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಶಿವಣಿ ಹೆಸರಲ್ಲೇ ‘ಶಿವ’ ಎಂಬ ಪದವಿದೆ. ಈ ಗ್ರಾಮದಲ್ಲಿ ಜನಿಸಿದವರು ಧನ್ಯರು. ಹಾವಗಿ ಸ್ವಾಮಿ ಇಲ್ಲಿ ತಪೋ ಅನುಷ್ಠಾನ ಕೈಗೊಂಡಿದ್ದರು. ಭಕ್ತರ ಇಷ್ಟಾರ್ಥ ಪೂರೈಸುವ ಶಕ್ತಿ ಅವರ ಕರ್ತೃ ಗದ್ದುಗೆಗೆ ಇದೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಬಿರಾದಾರ, ಪ್ರಮುಖರಾದ ಸಿದ್ರಾಮ ಬೋಗಳ, ಬಸವರಾಜ ಬಿರಾದಾರ ಉಪಸ್ಥಿತರಿದ್ದರು. ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
