ಉದಯವಾಹಿನಿ ,ಬೆಂಗಳೂರು: ರಾಜ್ಯ ಸರ್ಕಾರದ ಜಾರಿಗೆ ತಂದಿರುವ ಗ್ಯಾರಂಟಿಗಳ ಅನುಷ್ಠಾನ ಸಮಿತಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಕ ಮಾಡಿರುವುದನ್ನು ತಕ್ಷಣವೇ ರದ್ದುಪಡಿಸಬೇಕೆಂದು ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಸದಸ್ಯರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಎರಡೂ ಪಕ್ಷಗಳ ಶಾಸಕರು, ವಿಧಾನಪರಿಷತ್ ಸದಸ್ಯರು ರಾಜಭವನಕ್ಕೆ ತೆರಳಿ ದೂರು ನೀಡಿದ್ದಾರೆ.
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ ಉಭಯ ಪಕ್ಷಗಳ ಮುಖಂಡರು, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಬೊಕ್ಕಸದಿಂದ ಹಣ ನೀಡಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ನೇಮಕ ಮಾಡಿದ್ದಾರೆ. ಇದು ಸಂಪೂರ್ಣವಾಗಿ ನಿಯಮಗಳ ಉಲ್ಲಂಘನೆಯಾಗಿದ್ದು, ತಕ್ಷಣವೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕೆಂದು ಕೋರಲಾಗಿದೆ.
ರಾಜ್ಯಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನ ಹಾಗೂ ಇತರ ಸವಲತ್ತುಗಳು, ಉಪಾಧ್ಯಕ್ಷರಿಗೆ ರಾಜ್ಯ ಸ್ಥಾನಮಾನ, ಜಿಲ್ಲಾ ಸಮಿತಿ ಅಧ್ಯಕ್ಷರಿಗೆ ಪ್ರತಿ ತಿಂಗಳು 40 ಸಾವಿರ ರೂ, ಉಪಾಧ್ಯಕ್ಷರಿಗೆ 10 ಸಾವಿರ ರೂ, ಸದ್ಯರಿಗೆ 1100 ರೂ.ನೀಡಲಾಗುತ್ತದೆ.
ಇದೇ ರೀತಿ ತಾಲ್ಲೂಕು ಮಟ್ಟದ ಸಮಿತಿ ಅಧ್ಯಕ್ಷರಿಗೆ ಪ್ರತಿ ತಿಂಗಳು 25 ಸಾವಿರ ರೂ, ಸದಸ್ಯರಿಗೆ 1 ಸಾವಿರ ರೂ, ಬಿಬಿಎಂಪಿ ವ್ಯಾಪ್ತಿಯಲ್ಲಿ ಅಧ್ಯಕ್ಷರಿಗೆ 40 ಸಾವಿರ ರೂ. ಹಾಗೂ ಸದಸ್ಯರಿಗೆ 1200 ರೂ. ಕೊಡಲಾಗುತ್ತದೆ.
ಇದರಿಂದ 31 ಜಿಲ್ಲಾ ಅಧ್ಯಕ್ಷರಿಗೆ 12.40 ಲಕ್ಷ, ಉಪಾಧ್ಯಕ್ಷರಿಗೆ 1.86 ಕೋಟಿ, ಸದಸ್ಯರಿಗೆ 5,11,000, ತಾಲ್ಲೂಕು ಅಧ್ಯಕ್ಷರಿಗೆ 59.75 ಲಕ್ಷ, ತಾಲ್ಲೂಕು ಸದಸ್ಯರಿಗೆ 33.46 ಲಕ್ಷ ಹಣವನ್ನು ಸರ್ಕಾರದ ಬೊಕ್ಕಸದಿಂದ ನೀಡಲಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ.
ಇದು ಸಂಪೂರ್ಣವಾಗಿ ನಿಯಮಗಳ ಉಲ್ಲಂಘನೆಯಾಗಿದೆ. ಸಂವಿಧಾನದ ಪರಿಚ್ಛೇದ 191ರ ಪ್ರಕಾರ ಶಾಸಕರೇ ಎಲ್ಲಾ ಸಮಿತಿಗೂ ಸದಸ್ಯರಾಗಬೇಕು. ಅದೇ ರೀತಿ ಗ್ಯಾರಂಟಿ ಅನುಷ್ಠಾನ ಸಮಿತಿಗೂ ಶಾಸಕರನ್ನೇ ನೇಮಕ ಮಾಡಲು ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಮನವಿ ಮಾಡಲಾಗಿದೆ.
