ಉದಯವಾಹಿನಿ , ಹೊನ್ನಾಳಿ: ತಾಲ್ಲೂಕಿನ ತರಗನಹಳ್ಳಿ ಗ್ರಾಮದ ಬಸವೇಶ್ವರ ಸ್ಮಾಮಿಯ ರಥೋತ್ಸವ ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.ರಥವನ್ನು ವಿವಿಧ ಬಣ್ಣಗಳ ಬಾವುಟ ಹಾಗೂ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು ಬಸವೇಶ್ವರ ಸ್ವಾಮಿಯ ಉತ್ಸವಮೂರ್ತಿಯನ್ನು
ರಥದಲ್ಲಿ ಕೂರಿಸುತ್ತಿದ್ದಂತೆ ಭಕ್ತರು ಜೈಕಾರ ಹಾಕಿ ರಥವನ್ನು ಒಂದಷ್ಟು ದೂರಕ್ಕೆ ಎಳೆದುಕೊಂಡು ಹೋದರು.
ನಂತರ ಹೋದದಾರಿಯಲ್ಲಿಯೇ ರಥವನ್ನು ಮೂಲಸ್ಥಾನಕ್ಕೆ ತರಲಾಯಿತು.
ರಥದ ಕಳಸಕ್ಕೆ ಭಕ್ತರು ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ನಂತರ ಜವುಳ ಕಾರ್ಯಕ್ರಮ ನಡೆಯಿತು.
ರಥೋತ್ಸವಕ್ಕೆ ಬಂದಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಅನ್ನದಾಸೋಹ ದಾನಿಗಳು ಮಾಡಿದ್ದರು. ಅಡ್ಡಪಲ್ಲಕ್ಕಿಗೆ ಹೂವಿನ ಸೇವೆಯನ್ನು ಹಾಗೂ ಭಕ್ತರಿಗೆ ಕುಡಿಯುವ ನೀರಿನ ಸೇವೆಯನ್ನು ದಾನಿಗಳು ಮಾಡಿದ್ದರು. ರಥೋತ್ಸವ ನಡೆದ ನಂತರ ಪ್ರತಿ ವರ್ಷದಂತೆ ಬಾವುಟ ಹರಾಜು ಪ್ರಕ್ರಿಯೆ ನಡೆಯಿತು. 1.50 ಲಕ್ಷಕ್ಕೆ ತೊಗಲೇರಿ ಮಂಜುನಾಥ್ ಅವರು ಹರಾಜಿನಲ್ಲಿ ಬಾವುಟ ಪಡೆದುಕೊಂಡರು. ನಂತರ ಹೂವಿನ ಹಾರ 21,500ಕ್ಕೆ ಹಾಗೂ ಸೇಬಿನ ಹಾರವನ್ನು ₹ 10,000ಕ್ಕೆ ಹರಾಜು ಮಾಡಲಾಯಿತು. ನಂತರ ಸ್ವಾಮಿಯ ಹೂವಿನ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ಮಾರ್ಚ್ 12ರಂದು ರಾತ್ರಿ 8 ಗಂಟೆಗೆ ಜ್ಯೋತಿ ಮೆಲೋಡಿ ಆರ್ಕೆಸ್ಮಾ ತುಮಕೂರು ಇವರಿಂದ ಮನರಂಜನೆ ಕಾರ್ಯಕ್ರಮ ನಡೆಯಲಿದೆ ಎಂದು ಖಜಾಂಚಿ ಟಿ.ಜಿ.ರಮೇಶ್ ಗೌಡ ತಿಳಿಸಿದರು.
ದೇವಸ್ಥಾನ ಸಮಿತಿಯ ಗೌರವ ಅಧ್ಯಕ್ಷ ಎಸ್.ಜಿ. ಚಂದ್ರಪ್ಪ, ಅಧ್ಯಕ್ಷ ಬಿ. ಹೊಳೆಬಸಪ್ಪ, ಉಪಾಧ್ಯಕ್ಷ ಟಿ. ನಾಗರಾಜಪ್ಪ, ಕಾರ್ಯದರ್ಶಿ ಕೆ.ಸಿ. ಪ್ರಭಾಕರ್, ಖಜಾಂಚಿ ಟಿ.ಜಿ. ರಮೇಶ್‌ಗೌಡ ಹಾಗೂ ಪದಾಧಿಕಾರಿಗಳು, ಹಿರಿಯ ಮುಖಂಡರು ರಥೋತ್ಸವದಲ್ಲಿ ಭಾಗಿಯಾಗಿದ್ದರು.
