ಉದಯವಾಹಿನಿ , ದಾವಣಗೆರೆ: ಡಿಜೆಯ ಅಬ್ಬರಕ್ಕೆ ಹುಚ್ಚೆದ್ದು ಕುಣಿದ ಯುವಕ-ಯುವತಿಯರು… ಪಿಚಕಾರಿಯಲ್ಲಿ ಬಣ್ಣದಿಂದ ಮಿಶ್ರಣ ಮಾಡಿದ ನೀರಿನ ಕಚಗುಳಿ.. ಪೈಪ್ ಮೂಲಕ ಬರುತ್ತಿದ್ದ ನೀರಿನ ಕಾರಂಜಿಯಲ್ಲಿ ಮಿಂದ ಜನರು ಮಕ್ಕಳು, ಯುವಕ-ಯುವತಿಯರು, ಮಹಿಳೆಯರು, ಮಧ್ಯ ವಯಸ್ಕರು ಸೇರಿದಂತೆ ವಯಸ್ಸಿನ ಹಂಗಿಲ್ಲದೇ ಡಿಜಿ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ ಜನರು, ಬಣ್ಣಗಳನ್ನು ಎರಚುತ್ತಾ ಕೇಕೆ ಹಾಕಿದ ಯುವಕ-ಯುವತಿಯರು. -ಇವು ರಾಂ ಅಂಡ್ ಕೊ ವೃತ್ತದಲ್ಲಿ ಶುಕ್ರವಾರ ಕಂಡ ದೃಶ್ಯಗಳು. ಹೋಳಿ ಹಬ್ಬದ ಅಂಗವಾಗಿ ಇಡೀ ವೃತ್ತ ಅಕ್ಷರಶಃ ಬಣ್ಣದೋಕುಳಿಯಲ್ಲಿ ಮಿಂದು ಹೋಗಿತ್ತು, ಅಕ್ಕಪಕ್ಕದ ರಸ್ತೆಗಳು ಬಣ್ಣಗಳಿಂದ ಕೂಡಿದ್ದವು. ವೃತ್ತದಲ್ಲಿನ ವಿದ್ಯುತ್ ವೈರ್‌ಗಳ ಮೇಲೆ ಶರ್ಟ್ ಹಾಗೂ ಪ್ಯಾಂಟ್‌ಗಳು ಜೋತುಬಿದ್ದಿದ್ದವು.
ಬೆಳಿಗ್ಗೆಯಿಂದಲೇ ಬರುತ್ತಿದ್ದ ಜನರು ನಿಧಾನವಾಗಿ ಗುಂಪು ಸೇರತೊಡಗಿದರು. ಕಣ್ಣಿಗೊಂದು ಕೂಲಿಂಗ್ ಗ್ಲಾಸ್, ಬಾಯಲ್ಲಿ ಪೀಪಿ ಊದುತ್ತಾ ಬೆಳಿಗ್ಗೆಯಿಂದಲೇ ವಿವಿಧ ಬಡಾವಣೆಗಳ ಯುವಕರು ಬೈಕ್‌ಗಳಲ್ಲಿ ರಾಮ್ ಅಂಡ್ ಕೊ ವೃತ್ತದಲ್ಲಿ ಜಮಾಯಿಸಿದರು. ರಸ್ತೆಯುದ್ದಕ್ಕೂ ಕೇಕೆ ಹಾಕುತ್ತ, ಪೀಪಿ ಊದುತ್ತ ಸ್ನೇಹಿತರ ತಲೆ ಮೇಲೆ ಕೋಳಿ ಮೊಟ್ಟೆ ಒಡೆದು ಖುಷಿಪಟ್ಟರು. ಸಂಭ್ರಮದಿಂದ ಬಣ್ಣ ಆಡುವ ಮೂಲಕ ಸಾವಿರಾರು ಯುವಕ-ಯುವತಿಯರು ಹೋಳಿ ಹಬ್ಬಕ್ಕೆ ವಿಶೇಷ ಮೆರುಗು ನೀಡಿದರು. ಈ ಓಕುಳಿಯಾಟವನ್ನು ಕಣ್ಮುಂಬಿಕೊಳ್ಳಲು ನಗರದ ವಿವಿಧೆಡೆಯಿಂದ ಜನ ಸಾಗರೋಪಾದಿಯಲ್ಲಿ ಬಂದರು.
ಮಕ್ಕಳನ್ನು ಮೇಲಕ್ಕೆ ಎತ್ತಿ ಕ್ಯಾಚ್ ಹಿಡಿದುಕೊಳ್ಳುವುದು, ಹೆಗಲ ಮೇಲೆ ಕೂರಿಸಿಕೊಂಡು ನೃತ್ಯ ಮಾಡುವ ಮೂಲಕ ಮಕ್ಕಳಿಗೆ ಖುಷಿ ನೀಡಿದರು.
ಶರ್ಟ್‌ಗಳನ್ನು ಹರಿದು ಮೇಲಕ್ಕೆ ಎಸೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಿದ್ಯುತ್ ತಂತಿಗೆ ಸಿಲುಕಿಕೊಂಡ ನೂರಾರು ಅಂಗಿಗಳು ತೋರಣದಂತೆ ಕಂಡುಬಂದವು. ಆರ್‌ಸಿಬಿ ಬಾವುಟ, ಪುನೀತ್ ರಾಜ್ ಕುಮಾರ್ ಫೋಟೊ ಹಿಡಿದು ಕುಣಿದ ಯುವಕರು. ಕೆಲವರು ಸೆಲ್ಸಿ ಹಾಗೂ ಫೋಟೊ ತೆಗೆದುಕೊಂಡು ಖುಷಿ ಪಟ್ಟರು. ಸುತ್ತಲಿನ ಅಂಗಡಿ, ಮನೆಯ ಮೇಲೆ, ಬದಿಯಲ್ಲಿ ನಿಂತು ಜನರು ಹೋಳಿ ಸಡಗರ ಕಂಡು ಸಂಭ್ರಮಿಸಿದರು. ವಿವಿಧ ಹಾಡುಗಳಿಗೆ ತಕ್ಕಂತೆ ಕುಣಿದರು. ಪೊಲೀಸರು ಭದ್ರತೆ ಒದಗಿಸಿದ್ದರು. ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ತಂದರು.
