ಉದಯವಾಹಿನಿ,ಬೆಂಗಳೂರು : ನನ್ನ ಜೀವನದಲ್ಲೇ ಯಾರೊಂದಿಗೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿಲ್ಲ. ಅದರ ಅಗತ್ಯವೂ ನನಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೇನು ದೊಡ್ಡ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವನಲ್ಲ, ನನ್ನ ಇತಿಮಿತಿಯೊಳಗೆ ಸಿಕ್ಕಿರುವ ಅಕಾರವನ್ನು ಸಾರ್ವಜನಿಕರ ಸೇವೆಗೆ ಮೀಸಲಿಟ್ಟಿದ್ದೇನೆ. ಹೊಂದಾಣಿಕೆ ಮಾಡಿಕೊಂಡು ರಾಜಕೀಯ ಮಾಡಬೇಕಾದ ಪರಿಸ್ಥಿತಿ ನನಗೆ ಬಂದಿಲ್ಲ ಎಂದು ಪ್ರತಾಪ್ ಸಿಂಹ ಹೆಸರು ಹೇಳದೆ ಪರೋಕ್ಷವಾಗಿ ಕುಟುಕಿದರು.ಯಾರಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅಗತ್ಯವಿರುತ್ತದೆಯೋ ಅಂತಹವರು ಮಾಡಿಕೊಳ್ಳುತ್ತಾರೆ.
ನನಗೆ ಅಂತಹ ಪರಿಸ್ಥಿತಿ ಹಿಂದೆಯೂ ಬಂದಿಲ್ಲ, ಮುಂದೆ ಬರುತ್ತದೆಯೋ ಗೊತ್ತಿಲ್ಲ ಎಂದರು. ಪ್ರತಾಪ್ ಸಿಂಹಗೆ ಮಾಹಿತಿಯ ಕೊರತೆ ಇದೆ. ನಾನು ಮುಖ್ಯಮಂತ್ರಿಯಾದ ಬಳಿಕ ಎಸಿಬಿಯಲ್ಲಿದ್ದ 65 ಪ್ರಕರಣಗಳನ್ನು ಲೋಕಾಯುಕ್ತಕ್ಕೆ ತನಿಖೆ ನಡೆಸಲು ಶಿಫಾರಸು ಮಾಡಿದ್ದೆ. ವಿರೋಧ ಪಕ್ಷಗಳ ಜತೆ ಎಂತಹ ಸಂದರ್ಭದಲ್ಲೂ ಹೊಂದಾಣಿಕೆ ಮಾಡಿಕೊಂಡಿಲ್ಲ. ರಾಜಕಾರಣವೇ ಬೇರೆ, ವೈಯಕ್ತಿಕ ಸಂಬಂಧಗಳೇ ಬೇರೆ. ಎಲ್ಲವನ್ನೂ ಒಂದೇ ದೃಷ್ಟಿಯಿಂದ ನೋಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಬೊಮ್ಮಾಯಿ ಪ್ರಶ್ನಿಸಿದರು.
