ಉದಯವಾಹಿನಿ, ಬೆಂಗಳೂರು: ಸರಣಿ ಅಪಘಾತವೆಸಗಿದ ಕ್ಯಾಂಟರ್‌ ಲಾರಿ ಚಾಲಕ ಗಂಭೀರ ಗಾಯಗೊಂಡು ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರು ರಸ್ತೆಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ 8 ವಾಹನಗಳೂ ಜಖಂಗೊಂಡಿದ್ದು, ಕ್ಯಾಂಟರ್‌ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಜಗನ್‌(44) ಮೃತಪಟ್ಟ ಕ್ಯಾಂಟರ್‌ ಚಾಲಕ. ಈತ ತಮಿಳುನಾಡು ಮೂಲದವರು ಎಂಬುದು ಗೊತ್ತಾಗಿದೆ. ಸರಣಿ ಅಪಘಾತದಲ್ಲಿ ಗಾಯಗೊಂಡಿರುವ ಪಾದಚಾರಿ ಮನೋಜ್‌(20) ಹಾಗೂ ಆಟೋ ಚಾಲಕ ಚಾಂದ್‌ ಪಾಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕ್ಯಾಂಟರ್‌ ಚಾಲಕ ಜಗನ್‌ ಇಂದು ಬೆಳಗಿನ ಜಾವ 3.30ರ ಸುಮಾರಿನಲ್ಲಿ ತನ್ನ ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಮೈಸೂರು ಸರ್ಕಲ್‌ ಕಡೆಯಿಂದ ಬಾಪೂಜಿ ನಗರಕ್ಕೆ ಬರುತ್ತಿದ್ದಾಗ ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌‍ ನಿಲ್ದಾಣದ ಬಳಿ ನಿಯಂತ್ರಣ ತಪ್ಪಿ ರಸ್ತೆಬದಿ ನಿಲ್ಲಿಸಿದ್ದಂತಹ 4 ಆಟೋಗಳು, 2 ಕಾರು, 2 ಬೈಕ್‌ಗಳಿಗೆ ಹಾಗೂ ರಸ್ತೆಬದಿ ಹೋಗುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದು ನಂತರ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ನಿಂತಿದೆ.
ಒಟ್ಟು 8 ವಾಹನಗಳಿಗೆ ಡಿಕ್ಕಿ ಹೊಡೆದು ಸಂಭವಿಸಿದ ಸರಣಿ ಅಪತಾಘದಿಂದಾಗಿ ಕ್ಯಾಂಟರ್‌ ಚಾಲಕನ ತಲೆ, ಕೈ-ಕಾಲಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಆತನನ್ನು ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಬೆಳಗ್ಗೆ 6.45ರ ಸುಮಾರಿನಲ್ಲಿ ಮೃತಪಟ್ಟಿದ್ದಾರೆ.ಸುದ್ದಿ ತಿಳಿದು ಬ್ಯಾಟರಾಯನಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಕ್ಯಾಂಟರ್‌ ಚಾಲಕನ ಅತಿವೇಗ, ನಿರ್ಲಕ್ಷತನ ಹಾಗೂ ಅಜಾಗರೂಕತೆಯೇ ಸರಣಿ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!