ಉದಯವಾಹಿನಿ, ಸವಣೂರು: ‘ಎನ್‌ಪಿಎಸ್ ಬದಲಿಗೆ ಓಪಿಎಸ್ ಹಾಗೂ ಕೇಂದ್ರ ವೇತನವನ್ನು ರಾಜ್ಯ ನೌಕರರಿಗೂ ಜಾರಿಗೊಳಿಸುವಂತೆ ಮನವಿ ಮಾಡಿಕೊಂಡು ರಾಜ್ಯ ಸರ್ಕಾರದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಸರ್ಕಾರ ಯಾವುದೇ ಇರಲಿ. ಸರ್ಕಾರಿ ನೌಕರರಿಗೆ ಗೌರವದ ಜೀವನ ನಡೆಸಲು ಬೇಕಾಗುವ ಎಲ್ಲ ಸೌಲಭ್ಯಗಳನ್ನು ಕೊಡಿಸಲು ಸಿದ್ಧನಿದ್ದೇನೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಪಟ್ಟಣದ ಚನ್ನಬಸವೇಶ್ವರ ಮಂಗಲಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದ ವತಿಯಿಂದ ನಡೆದ ತಾಲ್ಲೂಕು ಮಟ್ಟದ ಸರ್ಕಾರಿ ನೌಕರರ ಕಾರ್ಯಾಗಾರ ಹಾಗೂ ಮಹಿಳಾ ದಿನಾಚರಣೆ ಮತ್ತು ನೌಕರರ ಸಮಾವೇಶ-2025 ಕಾರ್ಯಕ್ರಮದಲ್ಲಿ ಪದಗ್ರಹಣ ನಾಮಫಲಕ ಉದ್ಘಾಟಿಸಿ ಅವರು ಮಾತನಾಡಿದರು.
‘ನಾನು ಅಧ್ಯಕ್ಷನಾದ ಮೇಲೆ ರಾಜ್ಯ ಸರ್ಕಾರಿ ನೌಕರರ ಹಿತಕ್ಕಾಗಿ ಸುಮಾರು ಮೂವತ್ತಾರು ಆದೇಶಗಳನ್ನು ಸರ್ಕಾರದಿಂದ ಜಾರಿಗೊಳಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ. ಅವುಗಳಲ್ಲಿ ಮಹಿಳೆಯರಿಗಾಗಿಯೇ 6 ತಿಂಗಳ ಸಂಬಳ ಸಹಿತ ಹರಿಗೆ ರಜೆ, ವಾರ್ಷಿಕ ಹತ್ತು ರಜೆಗಳನ್ನು 15ಕ್ಕೆ ಹೆಚ್ಚಿಸಿದ್ದು ಸೇರಿದಂತೆ ಅನೇಕ ಆದೇಶಗಳಿವೆ.
ಇದೆಲ್ಲವೂ ಸಾಧ್ಯವಾಗಿದ್ದು ತಮ್ಮೆಲ್ಲರ ಸಾಂಘಿಕ ಶಕ್ತಿಯಿಂದ ಸಾಧ್ಯವಾಗಿದೆ. ಸಂಘದ ಶಕ್ತಿ ಅಗಾಧವಾಗಿದೆ ಹೋರಾಟಗಳು ಇನ್ನೂ ಸಾಕಷ್ಟು ಮಾಡಬೇಕಾಗಿದೆ’ ಎಂದರು. ಶಾಸಕ ಯಾಸೀರಅಹ್ಮದಖಾನ ಪಠಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸಭಾ ಭವನ ನಿರ್ಮಾಣಕ್ಕೆ ಹಿಂದಿನ ಸರ್ಕಾರ ₹1.5 ಕೋಟಿ ಅನುದಾನ ಘೋಷಣೆ ಕೇವಲ ರಾಜಕೀಯ ಗಿಮೀಕ್ ಆಗಿತ್ತು. ಇಂದಿನ ದಿನಮಾನದಲ್ಲಿ ಅಧಿಕಾರಿಗಳ ಕಾರ್ಯದಲ್ಲಿ ಶಾಸಕಾಂಗ ಹಸ್ತಕ್ಷೇಪ ಕಡಿಮೆಯಾಗಿದೆ’ ಎಂದರು.

Leave a Reply

Your email address will not be published. Required fields are marked *

error: Content is protected !!