ಉದಯವಾಹಿನಿ, ಗಜೇಂದ್ರಗಡ: ತಾಲ್ಲೂಕಿನಲ್ಲಿ ರೈತರು ಈಗಾಗಲೇ ಹಿಂಗಾರು ಬೆಳೆಗಳ ರಾಶಿ ಕಾರ್ಯ ಮುಗಿಸಿದ್ದು, ಜಾನುವಾರುಗಳಿಗೆ ಬೇಸಿಗೆಯಲ್ಲಿ ಆಹಾರದ ಕೊರತೆ ಉಂಟಾಗದಿರಲಿ ಎಂಬ ಉದ್ದೇಶದಿಂದ ಹೊಟ್ಟು-ಮೇವು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಎರಿ (ಕಪ್ಪು) ಭೂಮಿಯಲ್ಲಿ ಬಿತ್ತನೆಯಾಗಿದ್ದ ಕಡಲೆ, ಬಿಳಿಜೋಳ ಬೆಳೆಗಳ ರಾಶಿ ಕಾರ್ಯ ಮುಗಿದಿದೆ.
ಇದರ ಜೊತೆಗೆ ನೀರಾವರಿ ಸೌಲಭ್ಯವಿರುವ ಮಸಾರಿ ಭೂಮಿಯಲ್ಲಿ ಬಿತ್ತನೆಯಾಗಿದ್ದ ಶೇಂಗಾ ಬೆಳೆ ಕಟಾವು ಮುಗಿದಿದೆ. ಹಾಗಾಗಿ, ರೈತರು ಬಿಳಿ ಜೋಳದ ಮೇವು. ಕಡಲೆ ಮತ್ತು ಶೇಂಗಾ ಹೊಟ್ಟು ಸಂಗ್ರಹಿಸಿ, ಹೊಲಗಳಲ್ಲಿ, ಮನೆ ಹತ್ತಿರದ ಹಿತ್ತಲಲ್ಲಿ ಬಣವೆ ಒಟ್ಟುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಈ ಬಾರಿ ಹಿಂಗಾರಿ ಬಿತ್ತನೆ ಮಾಡುವ ಸಮಯದಲ್ಲಿ ಉತ್ತಮ ಮಳೆಯಾಗಿದ್ದರಿಂದ ಒಣ ಭೂಮಿಯಲ್ಲಿ ಬಿಳಿಜೋಳ, ಕಡಲೆ ಮತ್ತು ನೀರಾವರಿ ಇರುವ ಮಸಾರಿ ಭೂಮಿಯಲ್ಲಿ ಶೇಂಗಾ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆದರೆ ಶೇಂಗಾ ಬೆಳೆಗೆ ಚುಕ್ಕಿ ರೋಗ ಬಂದಿದ್ದರಿಂದ ಶೇಂಗಾ ಬಳ್ಳಿ ಸಮೃದ್ಯವಾಗಿ ಬೆಳೆದಿಲ್ಲ. ಹೀಗಾಗಿ ಈ ಬಾರಿ ಹೊಟ್ಟು, ತುಸು ದುಬಾರಿಯಾಗಿದ್ದು ಜಾನುವಾರು ಹೊಂದಿರುವ ರೈತರಿಗೆ ತುಟ್ಟಿಯಾಗಲಿದೆ.
ಜಾನುವಾರುಗಳನ್ನು ಹೊಂದಿರುವ ರೈತರು ತಮ್ಮ ಹೊಲಗಳಲ್ಲಿನ ಹೊಟ್ಟು ಮೇವಿನ ಜೊತೆಗೆ ಜಾನುವಾರು ಇಲ್ಲದವರ ಹೊಲದಲ್ಲಿರುವ ಹೊಟ್ಟು ಮೇವು ಖರೀದಿಸಿ ಟ್ರ್ಯಾಕ್ಟರ್ ಮೂಲಕ ಸಂಗ್ರಹಿಸುತ್ತಿದ್ದಾರೆ. ಬಿಳಿಜೋಳದ ಮೇವು ಟ್ರ್ಯಾಕ್ಟರ್ ಒಂದಕ್ಕೆ ₹6 ಸಾವಿರದಿಂದ ₹7 ಸಾವಿರ, ಶೇಂಗಾ ಹೊಟ್ಟು ಟ್ಯಾಕ್ಟರ್ ಒಂದಕ್ಕೆ ₹8 ಸಾವಿರದಿಂದ ₹10 ಸಾವಿರ ಹಾಗೂ ಕಡಲೆ ಹೊಟ್ಟು ₹5 ಸಾವಿರದಿಂದ 6 ಸಾವಿರ ಇದೆ
