ಉದಯವಾಹಿನಿ, ಕೋಲಾರ: ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆ ಅನುಷನ ವೇಳೆ ಗುಣಮಟ್ಟದಲ್ಲಿ ರಾಜಿ ಮಾಡಿದ ಹಾಗೂ ಲೋಪಯುಕ್ತ ಕಾಮಗಾರಿ ಕೈಗೆತ್ತಿಕೊಂಡ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ ಅವರು ಇಂದು ಎಚ್ಚರಿಕೆ ನೀಡಿದ್ದಾರೆ.
ಕೋಲಾರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ಕೋಲಾರ ತಾಲ್ಲೂಕಿನ ತೊರದೇವನಹಳ್ಳಿ ಗ್ರಾಮ ಪಂಚಾಯ್ತಿಯ ಬೆಳ್ಳಂಬರಿ ಮತ್ತು ಮಲ್ಲಸಂದ್ರ, ಮುದುವಾಡಿ ಗ್ರಾಮ ಪಂಚಾಯ್ತಿಯ ಅರಿಂಗನಹಳ್ಳಿ ಮತ್ತಿತರ ಗ್ರಾಮಪಂಚಾಯಿತಿಗಳಲ್ಲಿ ಜೆ ಜೆ ಎಂ ಕಾಮಗಾರಿ ಕುರಿತು ದಿಡೀರ್ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.
ಜಲಜೀವನ್ ಮಿಷನ್ ಕಾಮಗಾರಿಗಳ ವಿಳಂಬ, ಕಳಪೆ ಹಾಗೂ ಲೋಪಯುಕ್ತವಾಗಿ ನಡೆಸಲಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಹಲವಾರು ಸಭೆಗಳನ್ನು ನಡೆಸಿ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹಲವು ಬಾರಿ ಎಚ್ಚರಿಸಲಾಗಿತ್ತು. ಆದಾಗಿಯೂ ಕೆಲವು ಅಧಿಕಾರಿಗಳು ಕಳಪೆ ಕಾಮಗಾರಿ, ಕಾಮಗಾರಿಗಳ ವಿಳಂಬ ಮಾಡುತ್ತಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೋಲಾರ ಉಪವಿಭಾಗದ ಕಿರಿಯ ಅಭಿಯಂತರರೊಬ್ಬರನ್ನು ಈ ಕಾರಣಕ್ಕಾಗಿ ಅಮಾನತ್ತು ಮಾಡಲಾಗಿದೆ ಎಂದು ಅವರು ತಿಳಿಸಿದರು. ಪರಿಶೀಲನೆ ವೇಳೆ ಉದ್ದೇಶ ಈಡೇರದಿದ್ದರೆ ಈ ರೀತಿ ಕೋಟಿಗಟ್ಟಲೆ ವ್ಯಯಿಸಿ ಮಾಡಲಾಗುವ ಕಾಮಗಾರಿಯಿಂದ ಲಾಭವೇನು ಎಂದು ಅಸಮಾಧಾನ ವ್ಯಕ್ತಪಡಿಸಿದರು.
