ಉದಯವಾಹಿನಿ, ಬೆಂಗಳೂರು: ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್‌ ದೀಪ ಅಲಂಕಾರ ಮಾಡಲಾಗುವುದು ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳ ಆಯೋಜಿಸಿದ್ದ ಸಂದರ್ಭದಲ್ಲೇ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್‌ದೀಪ ಅಲಂಕಾರ ಕಾಮಗಾರಿ ಆರಂಭಗೊಂಡಿದ್ದು ಬಹುತೇಕ ಪೂರ್ಣಗೊಂಡಿದೆ. ಏಪ್ರಿಲ್‌ ಮೊದಲ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಲಿದ್ದಾರೆ ಎಂದರು.
ದೀಪಾಲಂಕಾರಕ್ಕೆ 5ಕೋಟಿ ರೂ.ವೆಚ್ಚವಾಗುತ್ತಿದೆ. ಪ್ರತಿ ಶನಿವಾರ, ಭಾನುವಾರ ಸಂಜೆ 6.30ಕ್ಕೆ ದೀಪಾಲಂಕಾರ ಮಾಡಲಾಗುತ್ತದೆ. ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಗಾಂಧಿ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಸಂದರ್ಭಗಳಲ್ಲಿ ವಿದ್ಯುತ್‌ ದೀಪಾಲಂಕಾರವಿರುತ್ತದೆ. ಇದರಿಂದ ಜನರಿಗೆ ವಿಧಾನಸೌಧ ವೀಕ್ಷಣೆ ಮಾಡಲು ಅನುಕೂಲವಾಗುತ್ತದೆ ಎಂದರು.
ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ ಆಯೋಜಿಸಿದ್ದ ಪುಸ್ತಕ ಮೇಳಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರತಿ ವರ್ಷ ಪುಸ್ತಕ ಮೇಳ ಮಾಡಲಾಗುವುದು. ಬೆಳಗಾವಿಯಲ್ಲಿ ಅಧಿವೇಶನ ಸಂದರ್ಭದಲ್ಲಿ ಪುಸ್ತಕ ಮೇಳ ಮಾಡಬೇಕೆಂಬ ಬೇಡಿಕೆಯಿದ್ದು, ಪರಿಶೀಲಿಸಲಾಗುವುದು ಎಂದು ಹೇಳಿದರು.
ಭದ್ರತೆ ಹೆಸರಿನಲ್ಲಿ ಜನರನ್ನು ವಿಧಾನಸೌಧ ವೀಕ್ಷಣೆಯಿಂದ ದೂರ ಇಡುವುದು ಸರಿಯಲ್ಲ. ಎಲ್ಲರನ್ನೂ ವೈರಿ, ಶತ್ರು ಅಥವಾ ಕಳ್ಳರಂತೆ ನೋಡಬಾರದು. ಶೇ.1ರಷ್ಟು ಸಮಾಜಘಾತಕ ಶಕ್ತಿಗಳು ಇರಬಹುದು. ಅವರಿಗೆ ಹೆದರಿ ಶೇ.99ರಷ್ಟು ಜನರಿಗೆ ವಂಚಿತರನ್ನಾಗಿ ಮಾಡಬಾರದು. ಪುಸ್ತಕ ಮೇಳ ಸಂದರ್ಭದಲ್ಲಿ ವಿಧಾನಸೌಧ, ವಿಧಾನಸಭೆಯ ಮೊಗಸಾಲೆ ಸಭಾಂಗಣವನ್ನು ವೀಕ್ಷಣೆ ಮಾಡಿ ಬಹಳಷ್ಟು ಜನರು ಖುಷಿ ಪಟ್ಟಿದ್ದಾರೆ. ಪ್ರತಿ ಭಾನುವಾರ ವಿಧಾನಸೌಧದ ವೀಕ್ಷಣೆಗೆ ಅವಕಾಶ ನೀಡುವ ಬಗ್ಗೆಯೂ ಚಿಂತನೆಯಿದೆ ಎಂದರು.

ಭದ್ರತೆ ಹೆಚ್ಚಿಸಲಿ: ಪೊಲೀಸರು ಇರುವುದೇ ಸಮಾಜಘಾತಕ ಶಕ್ತಿಗಳನ್ನು ಪತ್ತೆಹಚ್ಚಲು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ತಪಾಸಣೆ ಮಾಡಲಿ. ಆದರೆ ಸಾಮಾನ್ಯ ಜನರ ವೀಕ್ಷಣೆಗೆ ತೊಂದರೆ ಕೊಡುವುದು ಬೇಡ. ವಿಧಾನಸಭೆಯ ಸಭಾಂಗಣ ವೀಕ್ಷಿಸಿದ ಒಬ್ಬರು ಕುಂಭಮೇಳಕ್ಕೆ ಹೋಗುವುದಕ್ಕಿಂತಲೂ ಹೆಚ್ಚಿನ ಖುಷಿಯಾಗಿದೆ ಎಂದು ಹೇಳಿದ್ದಾರೆ ಎಂದರು.

ಬಹುಉಪಯೋಗಿ ಕಟ್ಟಡ: ಬೆಳಗಾವಿಯಲ್ಲಿ ಪ್ರತಿ ವರ್ಷ ಚಳಿಗಾಲದ ಅಧಿವೇಶನ ನಡೆಯುತ್ತದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳ ವಾಸ್ತವ್ಯಕ್ಕೆ ಅನುಕೂಲವಾಗುವ ಬಹು ಉಪಯೋಗಿ ಕಟ್ಟಡವನ್ನು ನಿರ್ಮಿಸುವ ಉದ್ದೇಶವಿದೆ. ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದ ಮಾದರಿಯಲ್ಲಿ 300 ಕೊಠಡಿಗಳ ಶಾಸಕರ ಭವನ ನಿರ್ಮಿಸುವ ಉದ್ದೇಶವಿದೆ.
ಈ ಬಗ್ಗೆ ಲೋಕೋಪಯೋಗಿ ಹಾಗೂ ಪ್ರವಾಸೋದ್ಯಮ ಸಚಿವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ವಿಧಾನಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ನಮೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಒಗ್ಗಟ್ಟಿನಿಂದ ಇದ್ದೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!