ಉದಯವಾಹಿನಿ, ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ಉಭಯಕುಶಲೋಪರಿ ವಿಚಾರಿಸಿದರು. ಸಚಿವ ಪ್ರಿಯಾಂಕ್‌ ಖರ್ಗೆ ಅವರೊಂದಿಗೆ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದ ಮಲ್ಲಿಕಾರ್ಜುನ ಖರ್ಗೆಯವರು ಸಿಎಂ ಆರೋಗ್ಯ ವಿಚಾರಿಸಿದರು.ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು ನಡೆಯಲು ಕಷ್ಟಪಡುತ್ತಿದ್ದಾರೆ. ಬಹುತೇಕ ವೀಲ್‌ಚೇರ್‌ನಲ್ಲಿ ಅಥವಾ ಕೋಲು ಹಿಡಿದುಕೊಂಡು ನಡೆದಾಡುತ್ತಿದ್ದಾರೆ. ಸರ್ಕಾರಿ ಕಾರ್ಯಕಲಾಪಗಳನ್ನು ಬದಿಗೊತ್ತಿ ಅತಿಮುಖ್ಯವಾದ ಕಾರ್ಯಕ್ರಮಗಳಲ್ಲಷ್ಟೇ ಭಾಗವಹಿಸುತ್ತಿರುವುದು ಕಂಡುಬರುತ್ತಿದೆ.
ಇತ್ತೀಚೆಗೆ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಸಿದ್ದರಾಮಯ್ಯ ಹೆಚ್ಚು ತೊಡಗಿಸಿಕೊಳ್ಳಲಿಲ್ಲ. ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಮಾತ್ರ ಕಾಣಿಸಿಕೊಂಡರು. ರಾಜ್ಯರಾಜಕಾರಣದಲ್ಲಿ ಅತ್ಯಂತ ಚುರುಕು ಹಾಗೂ ಲವಲವಿಕೆಯಿಂದ ಓಡಾಡುತ್ತಿದ್ದ ಸಿದ್ದರಾಮಯ್ಯ ಕಾಲು ನೋವಿನಿಂದ ಸಂಕಷ್ಟದಲ್ಲಿದ್ದಾರೆ.

ಬಹುತೇಕ ರಾಜಕೀಯ ಗಣ್ಯರು, ಹಿರಿಯರು ಸಿದ್ದರಾಮಯ್ಯನವರನ್ನುಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅವರದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಇಂದು ಸಿದ್ದರಾಮಯ್ಯನವರನ್ನು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ. ಈ ವೇಳೆ ಹನಿಟ್ರ್ಯಾಪ್‌ ಹಗರಣ ಕುರಿತು ವಿಧಾನಸಭೆಯಲ್ಲಿ ಸಚಿವ ಕೆ.ಎನ್‌.ರಾಜಣ್ಣ ನೀಡಿರುವ ಹೇಳಿಕೆಯ ಬಗ್ಗೆಯೂ ಹಿರಿಯ ನಾಯಕರು ಚರ್ಚೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!