ಉದಯವಾಹಿನಿ, ಬಿಗ್‌ಬಾಸ್ ಸೀಸನ್ 12 ಈಗ ಪಕ್ಕಾ ಪ್ರತಿಷ್ಠೆಯ ಕಣವಾಗಿ ಮಾರ್ಪಾಡಾಗಿದೆ. ದೊಡ್ಮನೆಯ ಆಟದ ಹವಾ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಹಲ್‌ಚಲ್ ಎಬ್ಬಿಸಿದೆ. ಬಿಗ್‌ಬಾಸ್‌ನ ಸ್ಪರ್ಧಿಗಳ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಅಲೆಯೊಂದು ಎದ್ದಿದೆ.ಬಿಗ್‌ಬಾಸ್ ಸೀಸನ್ 12 ಶುರುವಾದಾಗಿನಿಂದ ಈ ಬಾರಿ ಕಪ್ ಎತ್ತಿ ಹಿಡಿಯುವವರು ಯಾರು ಎನ್ನುವ ಚರ್ಚೆಗಳೇ ಜೋರಾಗಿದ್ದವು. ಈಗ ಅದಕ್ಕೆ ತೆರೆ ಬೀಳುವ ದಿನ ಸಮೀಪವಾಗಿದೆ. ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ.
ಇದರ ಬೆನ್ನಲ್ಲಿಯೇ ಸ್ಪರ್ಧಿಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ಬಿರುಗಾಳಿ ಎಬ್ಬಿಸಿದ್ದಾರೆ. ತಮ್ಮ ಪ್ರೀತಿಯ ಸ್ಪರ್ಧಿಗಳನ್ನು ಗೆಲ್ಲಿಸಲು ಅಭಿಮಾನಿಗಳ ದಂಡು ಟೊಂಕ ಕಟ್ಟಿ ನಿಂತಿವೆ.
ಮನೆ ಪ್ರವೇಶಿಸಿದ್ದ 22 ಮಂದಿಯಲ್ಲಿ ಈಗ ಟಾಪ್ 6 ಸ್ಪರ್ಧಿಗಳಾಗಿ ಧನುಷ್, ರಕ್ಷಿತಾ, ಗಿಲ್ಲಿ, ಅಶ್ವಿನಿ, ರಘು, ಕಾವ್ಯ ಈಗ ಮನೆಯಲ್ಲಿ ಉಳಿದಿದ್ದಾರೆ. ಈ ಆರು ಜನರಲ್ಲಿ ಕಪ್ ಗೆಲ್ಲುವವರು ಯಾರು ಎನ್ನುವ ಕುತೂಹಲದ ಜೊತೆಗೆ ಸ್ಪರ್ಧಿಗಳ ನಡುವೆ ಪೈಪೋಟಿಯೂ ಕೂಡ ಜೋರಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಳೆ ಮೈಸೂರು ಭಾಗದ ಜನರು ಗಿಲ್ಲಿ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದರೆ ಕನ್ನಡ ಪರ ಹೋರಾಟಗಾರರು ಅಶ್ವಿನಿ ಗೌಡ ಪ್ರಚಾರಕ್ಕೆ ಇಳಿದಿದ್ದಾರೆ.
ಕರಾವಳಿ ಕಡೆ ರಕ್ಷಿತಾ ಪರ ಪ್ರಚಾರ ಜೋರಾಗಿ ನಡೆಯುತ್ತಿದೆ. ಈ ಭಾಗ ಅಲ್ಲದೇ ರಾಜ್ಯದ ಹಲವು ಕಡೆಗಳಲ್ಲೂ ಸ್ಪರ್ಧಿಗಳ ಪರ ಅಭಿಮಾನಿಗಳು ಪ್ರಚಾರಕ್ಕೆ ಇಳಿದಿದ್ದಾರೆ. ಶನಿವಾರ ಮತ್ತು ಭಾನುವಾರ ಬಿಗ್‌ಬಾಸ್ ಫಿನಾಲೆ ನಡೆಯಲಿದ್ದು ಗಿಲ್ಲಿ ನಟ, ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ಟಾಪ್ 3 ಇರಬಹುದು ಎಂದು ಹಲವರು ಲೆಕ್ಕಾಚಾರ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಪರ ಪ್ರಚಾರ ಜೋರಿದೆ ಎನ್ನುವ ಕಾರಣಕ್ಕೆ ಇವರು ಜಯಗಳಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅತಿ ಹೆಚ್ಚು ಮತ ಪಡೆದವರು ಮಾತ್ರ ಬಿಗ್ ಬಾಸ್ ಗೆಲ್ಲುತ್ತಾರೆ. ಒಟ್ಟಾರೆ ಬಿಗ್ ಬಾಸ್ ಗೆಲ್ಲುವವರು ಯಾರು ಅನ್ನೋದಕ್ಕೆ ಕರುನಾಡು ಕುತೂಹಲದಿಂದ ಕಾಯುತ್ತಿದೆ.
