
ಉದಯವಾಹಿನಿ : ವಿಜ್ಞಾನಿಗಳು ಉತ್ತರ ಸೌದಿ ಅರೇಬಿಯದ ಗುಹೆಗಳಲ್ಲಿ ನೈಸರ್ಗಿಕವಾಗಿ ಮಮ್ಮಿಗಳಾಗಿ ರೂಪಾಂತರಗೊಂಡ ಚೀತಾಗಳ ಅವಶೇಷಗಳನ್ನು ಪತ್ತೆ ಹಚ್ಚಿದ್ದು, ಇದೇ ಮೊದಲ ಬಾರಿಗೆ ಈ ಅಪರೂಪದ ಶೋಧ ನಡೆದಿದೆ.
ಅವಶೇಷಗಳು 130 ಮತ್ತು 1,800ಕ್ಕೂ ಹೆಚ್ಚು ವರ್ಷಗಳ ನಡುವಿನಷ್ಟು ಹಿಂದಿನದಾಗಿವೆ. ಸಂಶೋಧಕರು ಅರಾರ್ ನಗರದ ಬಳಿಯ ಸ್ಥಳದಲ್ಲಿ ಏಳು ಚೀತಾ ಮಮ್ಮಿಗಳು ಮತ್ತು ಇತರ ಚೀತಾಗಳ 54 ಮೂಳೆಗಳನ್ನು ಪತ್ತೆ ಹಚ್ಚಿದ್ದಾರೆ.
ಮಮ್ಮಿಕರಣವು ಶವಗಳು ಕೊಳೆಯುವುದನ್ನು ನಿಧಾನಿಸುತ್ತದೆ ಮತ್ತು ಸಾವಿನ ಬಳಿಕ ಶವಗಳ ಸಂರಕ್ಷಣೆಗೆ ನೆರವಾಗುತ್ತದೆ. ಈಜಿಪ್ಟ್ನ ಮಮ್ಮಿಗಳು ಹೆಚ್ಚು ಪ್ರಸಿದ್ಧವಾಗಿದ್ದರೆ,ಮರಳುಗಾಡು,ನೀರ್ಗಲ್ಲು ಪ್ರದೇಶಗಳು ಮತ್ತು ಚೌಗು ಭೂಮಿಗಳಲ್ಲಿಯೂ ಮಮ್ಮಿಕರಣವು ನೈಸರ್ಗಿಕವಾಗಿ ನಡೆಯುತ್ತದೆ. ಹೊಸದಾಗಿ ಪತ್ತೆಯಾಗಿರುವ ಚೀತಾ ಮಮ್ಮಿಗಳು ಮಂಕಾದ ಕಣ್ಣುಗಳು ಮತ್ತು ಸಂಕುಚಿತ ಕಾಲುಗಳನ್ನು ಹೊಂದಿದ್ದುಒಣಗಿದ ಹೊಟ್ಟಿನಂತೆ ಕಾಣುತ್ತಿವೆ.
‘ಇಂತಹುದನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ’ ಎಂದು ಇಟಲಿಯ ಫ್ಲಾರೆನ್ಸ್ ವಿವಿಯ ಜೋನ್ ಮಡುರೆಲ್-ಮಲಪೀರಾ ಹೇಳಿದರು. ಅವರು ಈ ಸಂಶೋಧನೆಯಲ್ಲಿ ಭಾಗಿಯಾಗಿರಲಿಲ್ಲ. ಚೀತಾಗಳು ಇಷ್ಟೊಂದು ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದ್ದು ಹೇಗೆ ಎಂಬ ಬಗ್ಗೆ ವಿಜ್ಞಾನಿಗಳಿಗೆ ಖಚಿತವಿಲ್ಲ. ಆದಾಗ್ಯೂ ಗುಹೆಗಳಲ್ಲಿನ ಶುಷ್ಕ ಪರಿಸ್ಥಿತಿಗಳು ಮತ್ತು ಸ್ಥಿರವಾದ ತಾಪಮಾನಗಳು ಮಮ್ಮಿಕರಣಕ್ಕೆ ನೆರವಾಗಿರಬಹುದು ಎಂದು ಅಧ್ಯಯನವು ಸೂಚಿಸಿದೆ. ಸಂಶೋಧನಾ ವರದಿಯು ಕಮ್ಯುನಿಕೇಷನ್ಸ್ ಅರ್ತ್ ಆ್ಯಂಡ್ ಎನ್ವಿರಾನ್ವೆಂಟ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.
