ಉದಯವಾಹಿನಿ, ಮುಳಬಾಗಿಲು: ಬೇಸಿಗೆ ಕಾಲ ಬಂದಿರುವುದರಿಂದ ನಗರದಲ್ಲಿ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನಗರಸಭೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕ ಸಮೃದ್ಧಿ ವಿ.ಮಂಜುನಾಥ್ ಸೂಚಿಸಿದರು.
ನಗರಸಭೆ ಸಭಾಂಗಣದಲ್ಲಿ ಸಾಮಾನ್ಯ ಸಭೆ ಹಾಗೂ ೨೦೨೫-೨೬ನೇ ಸಾಲಿನ ಆಯವ್ಯಯ ಮಂಡನೆ ಸಭೆಯಲ್ಲಿ ಮಾತನಾಡಿ, ಮುಂದಿನ ಏಪ್ರಿಲ್ ತಿಂಗಳ ಹತ್ತರಂದು ನಗರದಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕಾಗಿ ನಗರಸಭೆ ಸದಸ್ಯರ ಸಭೆ ನಡೆಸಿ ಟಾಸ್ಕ್ ಪೋಸ್ ಸಂಸ್ಥೆಯನ್ನು ರಚಿಸಿ ಎಲ್ಲೆಲ್ಲಿ ನೀರಿನ ಸಮಸ್ಯೆ ಕಂಡು ಬರುತ್ತದೆ. ಆ ಪ್ರದೇಶದಲ್ಲಿ ನಗರಸಭೆಯಿಂದ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಜೊತೆಗೆ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸಲಾಗುವುದು ಎಂದು ತಿಳಿಸಿದರು.
ನಗರದ ಡಿವಿಜಿ ಕನ್ನಡ ಗಡಿ ಭವನದ ಒಳಗಡೆ ಎಸಿ ಅಳವಡಿಸಲಾಗುವುದು ಶಾರದಾ ಮಹಿಳಾ ಕಾಲೇಜು ಮುಂಭಾಗದ ರಸ್ತೆ ಅದಿಗಟ್ಟಿದ್ದು ರಸ್ತೆ ಅಭಿವೃದ್ಧಿ ಕಾರ್ಯ ಕೈಗೊತ್ತಿಕೊಳ್ಳಲಾಗುವುದು ಎಂದರಲ್ಲದೆ ನಗರಸಭೆ ಸದಸ್ಯರ ಅವಧಿ ಇನ್ನು ಕೇವಲ ಐದು ತಿಂಗಳು ಮಾತ್ರ ಉಳಿದಿದ್ದು ರಾಜಕಾರಣ ಮಾಡದೆ ಜನರ ಸೇವೆ ನಿಸ್ವಾರ್ಥದಿಂದ ಮಾಡಬೇಕೆಂದು ಸದಸ್ಯರಿಗೆ ಕಿವಿಮಾತು ಹೇಳಿದರು.

ನೇತಾಜಿ ಕ್ರೀಡಾಂಗಣದಲ್ಲಿ ಕ್ರೀಡಾಂಗಣ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಿಸಿ ಸುಸಜ್ಜಿತ ಕ್ರೀಡಾಂಗಣವನ್ನಾಗಿ ರೂಪಿಸಲಾಗುವುದು, ಏಪ್ರಿಲ್ ಒಂದರಿಂದ ರಾಷ್ಟ್ರೀಯ ಹೆದ್ದಾರಿ ಬಾಲಾಜಿ ಭವನದಿಂದ ಎಂಸಿ ರಸ್ತೆ ಮೂಲಕ ನರಸಿಂಹ ತೀರ್ಥ ಬಳಿ ಇರುವ ನ್ಯಾಯಾಲಯ ಕಟ್ಟಡ ಮುಂಭಾಗದ ರಸ್ತೆ ವರೆಗೂ ಹೊಸದಾಗಿ ಬೀದಿ ದೀಪಗಳನ್ನು ಅಳವಡಿಸಲು ಮುಂದಾಗಿರುವುದಾಗಿ ತಿಳಿಸಿದರು. ನಗರಸಭೆ ಸದಸ್ಯ ಡಿ.ಸೋಮಣ್ಣ ಮಾತನಾಡಿ, ನಗರಸಭೆಗಳನ್ನು ನಡೆಸಿದಾಗ ಮೊದಲು ರಾಷ್ಟ್ರಗೀತೆ ಹಾಗೂ ನಾಡಗೀತೆಗಳನ್ನು ಹಾಡಿದ ನಂತರವೇ ಸಭೆ ಸಮಾರಂಭಗಳನ್ನು ಪ್ರಾರಂಭಿಸಬೇಕು ಎಂದು ನೀಡಿದ ಸಲಹೆಗೆ ಶಾಸಕರು ಸೇರಿದಂತೆ ನಗರಸಭೆಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಪೌರಾಯುಕ್ತರು ಮತ್ತು ಸಿಬ್ಬಂದಿ ಎದ್ದುನಿಂತು ರಾಷ್ಟ್ರಗೀತೆ ಮತ್ತು ನಾಡಗೀತೆಗಳನ್ನು ಹಾಡಿ ಗೌರವಿಸಿದರು. ನಗರಸಭೆ ಸದಸ್ಯ ಬೋವಿ ಕಾಲೋನಿ ನಾಗರಾಜ್ ಮಾತನಾಡಿ,ವಾರ್ಡ್ ನಂಬರ್ ಏಳರ ಮೆಹಬೂಬ್ ನಗರದ ಜನತೆ ಎಲ್ಲಾ ಚುನಾವಣೆಗಳಲ್ಲಿ ಪಡಿತರ ಚೀಟಿಗಳಲ್ಲಿ ಆಧಾರ್ ಕಾರ್ಡ್‌ನಲ್ಲಿ ಮತದಾರರ ಪಟ್ಟಿಯಲ್ಲಿ ಮೆಹಬೂಬ್ ನಗರ ಎಂದು ನಮೂದಿಸಲಾಗಿದೆ,ಆದರೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನಿವೇಶನಗಳನ್ನು ಮಾರಾಟ ಅಥವಾ ಖರೀದಿಗಾಗಿ ನೋಂದಣಿ ಮಾಡಿಸುವಾಗ ನುಗಲು ಬಂಡೆ ಬಡಾವಣೆ ಎಂದು ನಮೂದಿಸಲಾಗುತ್ತಿದೆ, ಇದರಿಂದ ಮೆಹಬೂಬ್ ನಗರ ಜನತೆ ಸಮಸ್ಯೆ ಎದುರಿಸುತ್ತಿದ್ದು, ಕೂಡಲೇ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.

 

Leave a Reply

Your email address will not be published. Required fields are marked *

error: Content is protected !!