ಉದಯವಾಹಿನಿ, ಹಿರಿಯೂರು: ಚಿತ್ರದುರ್ಗ-ಹಿರಿಯೂರು ನಗರಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ 1991ರಲ್ಲಿ ನಿರ್ಮಾಣಗೊಂಡಿದ್ದ ಲಕ್ಕವ್ವನಹಳ್ಳಿ ಒಡ್ಡು (ಚೆಕ್ ಡ್ಯಾಂ) ಈಗ ನಿರುಪಯುಕ್ತವಾಗಿದ್ದು. ನಗರಸಭೆ ಆಡಳಿತ ಬದ್ಧತೆ ತೋರಿದಲ್ಲಿ ಇದನ್ನು ಸುಂದರ ಪ್ರವಾಸಿ ತಾಣವನ್ನಾಗಿಸುವ ಎಲ್ಲ ಸಾಧ್ಯತೆಗಳಿವೆ.1982ರಲ್ಲಿ ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿ ಆಗಿದ್ದಾಗ ಹಿರಿಯೂರು ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಉದ್ದೇಶದಿಂದ *85 ಲಕ್ಷ ವೆಚ್ಚದಲ್ಲಿ ಒಡ್ಡು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಪ್ರತಿ 15 ದಿನಕ್ಕೊಮ್ಮೆ ವಾಣಿವಿಲಾಸ ಜಲಾಶಯದಿಂದ ವೇದಾವತಿ ನದಿ ಮೂಲಕ ಈ ಒಡ್ಡಿಗೆ ನೀರು ಹರಿಸಿ, ಅದನ್ನು ಶುದ್ದೀಕರಿಸಿ ಎರಡೂ ನಗರಗಳಿಗೆ ಪೂರೈಸಲಾಗುತ್ತಿತ್ತು. ನದಿ ಪಾತ್ರದ ಹಳ್ಳಿಗಳ ಜನ ಕುಡಿಯುವ ನೀರನ್ನು ಮಲಿನಗೊಳಿಸುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕರು ದೂರುತ್ತಿದ್ದರು. 2016ರಲ್ಲಿ ಶಾಸಕರಾಗಿದ್ದ ಡಿ. ಸುಧಾಕರ್ ಅವರು ಸಾರ್ವಜನಿಕರ ಬೇಡಿಕೆಗೆ ಮಣಿದು ಲಕ್ಕವ್ವನಹಳ್ಳಿ ಒಡ್ಡಿನ ಬದಲಾಗಿ, ಜಲಾಶಯದಿಂದ ನೇರವಾಗಿ ₹40 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್ ಮೂಲಕ ನೀರು ತರುವ ಯೋಜನೆಗೆ ಸರ್ಕಾರದ ಮಂಜೂರಾತಿ ತಂದಿದ್ದರು ಎಂಟು ವರ್ಷದಿಂದ ನಗರದ ಜನತೆಗೆ ಪೈಪ್‌ಲೈನ್ ಮೂಲಕ ವಾಣಿವಿಲಾಸ ಜಲಾಶಯದಿಂದ ಶುದ್ಧ ನೀರು ಸಿಗುತ್ತಿದೆ. ಆದರೆ ಕುಡಿಯುವ ನೀರಿನ ಸಂಗ್ರಹಕ್ಕೆಂದು ನಿರ್ಮಿಸಿದ್ದ ಲಕ್ಕವ್ವನಹಳ್ಳಿ ಒಡ್ಡು ನಿರುಪಯುಕ್ತವಾಗಿದೆ. ಪಂಪ್‌ಸೆಟ್ ಕೊಠಡಿಗಳು, ಪರಿವರ್ತಕಗಳು ಶಿಥಿಲವಾಗಿವೆ.
ಒಡ್ಡಿನಲ್ಲಿ ಈಚಿನ ದಿನಗಳಲ್ಲಿ ಹೂಳು ತುಂಬುತ್ತಿದೆ. ಮಳೆಯಾದಾಗ, ವೇದಾವತಿ ನದಿಗೆ ನಿರ್ಮಿಸಿರುವ ಒಡ್ಡು ತುಂಬಿ ಹರಿಯುತ್ತದೆ. ಅಲ್ಲದೇ ಚಳ್ಳಕೆರೆ, ಮೊಳಕಾಲೂರು ತಾಲ್ಲೂಕುಗಳಿಗೆ ವಾಣಿವಿಲಾಸದ ನೀರನ್ನು ಇದೇ ಒಡ್ಡಿನ ಮೂಲಕ ಹರಿಸುವ ಕಾರಣ, ಇದು ಬಹುತೇಕ ವರ್ಷವಿಡೀ ಜೀವಂತವಾಗಿರುತ್ತದೆ. ಆದರೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಒಡ್ಡು ನಗರಸಭೆಗೂ ಬೇಕಿಲ್ಲ. ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಗೂ ಬೇಕಿಲ್ಲದಂತಾಗಿದ್ದು, ಇದರ ಅಂಚಿನಲ್ಲಿ ಗಿಡಗಳು ಪೊದೆಯಂತೆ ಬೆಳೆದು ಇಡೀ ಪರಿಸರವನ್ನು ಮಲಿನಗೊಳಿಸಿವೆ.

Leave a Reply

Your email address will not be published. Required fields are marked *

error: Content is protected !!