ಉದಯವಾಹಿನಿ, ಬೆಂಗಳೂರು : ನಂದಿನಿ ಹಾಲಿನ ದರ ಪರಿಷ್ಕರಣೆ ಕುರಿತು ಸಚಿವ ಸಂಪುಟ ಸಭೆಯಲ್ಲಿಂದು ಮಹತ್ವದ ಚರ್ಚೆ ನಡೆದಿದ್ದು, ಪ್ರತೀ ಲೀಟರ್ ಹಾಲಿಗೆ 4 ರೂ. ಏರಿಕೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.ಇತ್ತೀಚೆಗೆ ಕೆಎಂಎಫ್‌ನ ಆಡಳಿತ ಮಂಡಳಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದ ವೇಳೆ ಪ್ರತಿ ಲೀಟರ್‌ಗೆ 5 ರೂ. ದರ ಹೆಚ್ಚಳ ಮಾಡಬೇಕು ಮತ್ತು ಈ ಮೊದಲು ದರ
ಪರಿಷ್ಕರಣೆ ಸಲುವಾಗಿ ಹೆಚ್ಚುವರಿ ಹಾಲಿನ ಸೇರ್ಪಡೆಯ ನಿರ್ಧಾರವನ್ನು ರದ್ದುಪಡಿಸಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು.ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದ್ದರು. ಇಂದು ನಡೆದ ಸಂಪುಟ ಸಭೆಯಲ್ಲಿ ಬಹುತೇಕ ಸಚಿವರು ದರ ಏರಿಕೆಗೆ ಸಕಾರಾತ್ಮಕವಾಗಿದ್ದು, ಮೂಲಗಳ ಪ್ರಕಾರ ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳ ಮಾಡಲು ಸಮ್ಮತಿಸಲಾಗಿದೆ.
ಈ ಮೊದಲು ಕಳೆದ 2023ರ ಆಗಸ್ಟ್ 1 ರಂದು ಪ್ರತಿ ಅರ್ಧ ಲೀಟರ್ ಹಾಲಿಗೆ 50 ಎಂಎಲ್ ಹೆಚ್ಚುವರಿಯಾಗಿ ಸೇರ್ಪಡೆ ಮಾಡಿ ದರವನ್ನು 2 ರೂ.ಗೆ ಹೆಚ್ಚಿಸಲಾಗಿತ್ತು. ಈಗ ಆ 50 ಎಂಎಲ್
ಸೇರ್ಪಡೆಯನ್ನು ಬಹುತೇಕ ಹಿಂಪಡೆಯುವ ಸಾಧ್ಯತೆಯಿದೆ. ಜೊತೆಗೆ 4 ರೂ. ದರ ಹೆಚ್ಚಳವಾದರೆ ಪ್ರತೀ ಲೀಟರ್ ಸಾಮಾನ್ಯ ಹಾಲಿಗೆ 46 ರೂ.ಗಳಷ್ಟಾಗುವ ಸಾಧ್ಯತೆಯಿದೆ.ಶುಭಂ ಮಾದರಿಯ ವಿಶೇಷ ಹಾಲಿಗೆ 54 ರೂ.ಗಳಷ್ಟಾಗುವ ನಿರೀಕ್ಷೆಯಿದೆ. ಹಾಲಿನ ದರ ಹೆಚ್ಚಳದ ಜೊತೆಗೆ ಮೊಸರು ಹಾಗೂ ಇತರ ಉಪ ಉತ್ಪನ್ನಗಳ ದರ ಕೂಡ ಪರಿಷ್ಕರಣೆಯಾಗುವ ನಿರೀಕ್ಷೆಗಳಿವೆ.ಉತ್ಪಾದನಾ ವೆಚ್ಚ, ಮಾರುಕಟ್ಟೆ ವೆಚ್ಚದ ನಡುವೆ ಅಜಗಜಾಂತರ ವ್ಯತ್ಯಾಸವಿದೆ. 2 ರೂ. ಏಜೆಂಟರ ಕಮಿಷನ್ ಹಾಗೂ ಸಾಗಾಣಿಕೆ ವೆಚ್ಚದಿಂದಾಗಿ ಹಾಲು ಒಕ್ಕೂಟಗಳು ನಷ್ಟ ಅನುಭವಿಸುತ್ತಿವೆ.ಹೀಗಾಗಿ ದರ ಹೆಚ್ಚಳ ಅನಿವಾರ್ಯ ಎಂದು ಕೆಎಂಎಫ್ ಪ್ರತಿಪಾದಿಸಿತ್ತು.
