ಉದಯವಾಹಿನಿ, ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಅಂದಿನ ಬೃಹತ್ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಮೇಲೆ ಕೇಳಿ ಬಂದಿದ್ದ ಸಿ.ಡಿ ಪ್ರಕರಣದ ಹಿಂದೆ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳೇ ಪ್ರಮುಖ ರೂವಾರಿಗಳೆಂದು ಬಿಜೆಪಿಯಿಂದ ಉಚ್ಛಾಟಿತಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಟೋಟಕ ಆರೋಪ ಮಾಡಿದ್ದಾರೆ.
ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದಲೇ ಆರು ವರ್ಷಗಳ ಕಾಲ ಉಚ್ಛಾಟನೆಗೊಂಡ ಬಳಿಕ ಮೊದಲ ಬಾರಿಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಹಗರಣ ಮಾಡಿದ್ದೇ ವಿಜಯೇಂದ್ರ ಮತ್ತು ಡಿ.ಕೆ.ಶಿವಕುಮಾರ್ ಅವರು. ಡಿಕೆಶಿ ಜತೆ ಸೇರಿ ವಿಜಯೇಂದ್ರ ಅವರು ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ದರು ಎಂದು ಬಾಂಬ್ ಸಿಡಿಸಿದ್ದಾರೆ.
ಈಗ ಎದ್ದಿರುವ ಹನಿಟ್ರ್ಯಾಪ್ ಹಗರಣದಲ್ಲೂ ಇದೇ ತಂಡ ಇದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದರೆ ಸತ್ಯಾಂಶ ಹೊರಬರಲಿದೆ.
ಅಪ್ಪ-ಮಕ್ಕಳ ಕುಟುಂಬವನ್ನು ರಾಜಕೀಯದಿಂದ ದೂರ ಮಾಡುತ್ತೇನೆ. ದೆಹಲಿಯಲ್ಲಿ ಇರುವ ನಮ ಸಂಸದರು ಎಲ್ಲರೂ ವಿಜಯೇಂದ್ರ ವಿರುದ್ಧ ಇದ್ದಾರೆ. ಮೊದಲು ಅವರನ್ನು ಪಕ್ಷದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದಾರೆ ಎಂದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ವಿಜಯೇಂದ್ರ ಕೂಡ ಉಚ್ಚಾಟನೆಗೆ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ. ಉಚ್ಚಾಟನೆ ಮಾಡಿದರೆ, ಬಿಜೆಪಿಯಿಂದ ಹೊರ ಹೋಗಬಹುದು ಎಂದು ಈ ಕುತಂತ್ರ ಅನುಸರಿಸಿದ್ದಾರೆ. ವೀರಶೈವ ಲಿಂಗಾಯತ ಸಮುದಾಯ ಯಡಿಯೂರಪ್ಪ, ವಿಜಯೇಂದ್ರ ಜತೆ ಇಲ್ಲ. ಮಹಾಭಾರತ, ರಾಮಾಯಣ ಕಾಲದಿಂದಲೂ ಈತರಹದ ಅನ್ಯಾಯ ನಡೆದುಕೊಂಡು ಬರುತ್ತಿದೆ.
