ಉದಯವಾಹಿನಿ, ಮ್ಯಾಂಡಲೆ : ಮ್ಯಾನಾರ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸತ್ತವರ ಸಂಖ್ಯೆ 1,700ಕ್ಕಿಂತ ಹೆಚ್ಚಿದೆ. ಅವಶೇಷಗಳಿಂದ ಶವಗಳನ್ನು ಹೊರತೆಗೆ ಯಲಾಗಿದ್ದು, ಘಟನೆಯಲ್ಲಿ ಇನ್ನೂ 3,400 ಮಂದಿ ಗಾಯಗೊಂಡಿದ್ದಾರೆ ಮತ್ತು 300ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಕರ್ತರು ಕುಸಿದ ಕಟ್ಟಡಗಳ ಅವಶೇಷಗಳನ್ನು ಅಗೆದು ಬದುಕುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. . ಕನಿಷ್ಠ 139 ಜನರು ಕಾಣೆಯಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಬ್ಯಾಂಕಾಕ್‌ನಲ್ಲಿ ಸುಮಾರು 100 ಸಾವುಗಳು ದೃಢಪಟ್ಟಿವೆ.
ಹಲವಾರು ಕಟ್ಟಡಗಳು, ಸೇತುವೆಗಳು ನೆಲಸಮವಾಗಿದೆ. ಕಟ್ಟಡಗಳ ಅವಶೇಷಗಳ ಅಡಿಯಿಂದ ಈಗಾಗಲೇ ಹಲವು ಮೃತದೇಹಗಳನ್ನು ಹೊರತೆಗೆಯಲಾಗುತ್ತಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಸಾವಿನ ಸಂಖ್ಯೆ ಹಾಗೂ ಗಾಯಾಳುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಸಂವಹನ ವ್ಯವಸ್ಥೆ ಕಡಿತವಾಗಿರುವುದರಿಂದ ವಿಪತ್ತಿನ ನಿಜವಾದ ಪ್ರಮಾಣ ನಿಧಾನವಾಗಿ ಗೊತ್ತಾಗುತ್ತಿದೆ. ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ.
ಸೇನೆಯು ಈ ಹಿಂದೆ 1,644 ಮಂದಿ ಸಾವನ್ನಪ್ಪಿರುವುದಾಗಿ ವರದಿ ಮಾಡಿತ್ತು. ಆದರೆ ನಿರ್ದಿಷ್ಟ ಅಂಕಿಅಂಶಗಳನ್ನು ನೀಡಿರಲಿಲ್ಲ. ಕಳೆದ ಶುಕ್ರವಾರ ಮಧ್ಯಾಹ್ನ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಜಧಾನಿ ನೈಪಿಟಾವ್ ಮತ್ತು ಎರಡನೇ ದೊಡ್ಡ ನಗರವಾದ ಮ್ಯಾಂಡಲೆ ಸೇರಿದಂತೆ ವ್ಯಾಪಕ ಹಾನಿಯನ್ನುಂಟುಮಾಡಿದೆ ಎಂದು ಸರ್ಕಾರಿ ವಕ್ತಾರ ಮೇಜರ್ ಜನರಲ್ ಜಾವ್ ಮಿನ್ ಟುನ್ ಸರ್ಕಾರಿ ಎಂಆರ್‌ಟಿವಿಗೆ ತಿಳಿಸಿದ್ದಾರೆ.
