ಉದಯವಾಹಿನಿ, ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆ ವತಿಯಿಂದ ಕರ್ನಾಟಕದ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ ಬಂದಿದೆ.ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ನಿಲುಗಡೆಗೆ ಸಂಬಂಧಿಸಿದಂತೆ ಮಹತ್ವದ ಆದೇಶ ಹೊರಡಿಸಲಾಗಿದೆ, ಅದನ್ನು ಹಾವೇರಿಯಲ್ಲಿ ನಿಲುಗಡೆ ಮಾಡಲು ನಿರ್ದೇಶಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಹಾವೇರಿಯಲ್ಲಿ ನಿಲುಗಡೆಗೆ ಸೂಚಿಸುವಂತೆ ರೈಲ್ವೆ ಇಲಾಖೆಯನ್ನು ಕೋರಿದ್ದರು. ಇದನ್ನು ಒಪ್ಪಿಕೊಂಡು ರೈಲ್ವೆ ಇಲಾಖೆ ಈಗ ಆದೇಶ ಹೊರಡಿಸಿದೆ.
ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಾವೇರಿ ನಿಲ್ದಾಣದಲ್ಲಿ ತಕ್ಷಣದಿಂದಲೇ ಪ್ರಾಯೋಗಿಕ ನಿಲುಗಡೆ ನೀಡಬೇಕು. ಟಿಕೆಟ್ ವಿತರಣೆಯ ಮೇಲೆ ನಿಗಾ ಇಡಬೇಕು ಮತ್ತು ಹಾವೇರಿಯಲ್ಲಿ ನಿಲುಗಡೆ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ನೀಡಬೇಕು ಎಂದು ರೈಲ್ವೆ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.
ತಮ್ಮ ಕೋರಿಕೆಯ ಮೇರೆಗೆ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಾವೇರಿಯಲ್ಲಿ ನಿಲುಗಡೆ ನೀಡಿದ ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆಗೆ ಬಸವರಾಜ ಬೊಮ್ಮಾಯಿ ಧನ್ಯವಾದ ಅರ್ಪಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಅವರು, ಧಾರವಾಡ ಮತ್ತು ಬೆಂಗಳೂರು ನಡುವೆ ಚಲಿಸುವ ವಂದೇ ಭಾರತ್ ರೈಲನ್ನು ಹಾವೇರಿಯಲ್ಲಿ ನಿಲ್ಲಿಸಲು ಆದೇಶಿಸಿದ್ದಕ್ಕಾಗಿ ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
