ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮತ್ತೊಮ್ಮೆ ಸಂಕಷ್ಟ ಎದುರಾಗಿದ್ದು ಜಾರಿ ನಿರ್ದೇಶನಾಲಯ ಲೋಕಾಯುಕ್ತ ತನಿಖೆ ಮುಕ್ತಾಯಗೊಂಡಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದೆ. ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರು, ಸರ್ಕಾರಿ ಅಭಿಯೋಜಕರ ಮೂಲಕ ನಗರ ಹೆಚ್ಚುವರಿ ಸಿವಿಲ್ ಮತ್ತು ಸೆಶೆನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯ ಲೋಕಾಯುಕ್ತ ಪೊಲೀಸರು ಮುಡಾ ಹಗರಣದಲ್ಲಿ ಮಾಡಿರುವ ತನಿಖೆಯನ್ನು ಪ್ರಶ್ನಿಸಿದೆ.
ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂ.464 ರಲ್ಲಿ 3 ಎಕರೆ 16 ಗುಂಟೆ ಜಮೀನನ್ನು ಮುಡಾದಿಂದ ಎಲ್ ಅಂಡ್ ಟಿ ಸಂಸ್ಥೆ ನಿವೇಶನವನ್ನಾಗಿ ಅಭಿವೃದ್ಧಿಪಡಿಸಿತ್ತು. ಅದರ ಬಳಿಕ ಮಲ್ಲಿಕಾರ್ಜುನ ಸ್ವಾಮಿಯವರು ದೇವರಾಜ ಅವರಿಂದ ಈ ಜಮೀನನ್ನು ಖರೀದಿ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಸುಮಾರು 4 ರಿಂದ 5 ಅಂಶಗಳನ್ನು ಪ್ರಸ್ತಾಪಿಸಿರುವ ಜಾರಿ ನಿರ್ದೇಶನಾಲಯ ಲೋಕಾಯುಕ್ತ ಪೊಲೀಸರು ತನಿಖೆಯ ವೇಳೆ ಈ ಅಂಶಗಳನ್ನು ಪರಿಗಣಿಸಿಲ್ಲ. ಹೀಗಾಗಿ ತನಿಖೆ ಸಮರ್ಪಕ ಅಲ್ಲ ಎಂದು ಅಭಿಪ್ರಾಯಪಟ್ಟಿದೆ. ತನಿಖೆಯ ಮೂಲವನ್ನು ಪ್ರಶ್ನಿಸುವ ಮೂಲಕ ಜಾರಿ ನಿರ್ದೇಶನಾಲಯ ಮುಡಾ ಹಗರಣಕ್ಕೆ ಹೊಸ ತಿರುವು ನೀಡಿದೆ.ಮೂಲ ದೂರುದಾರರಾದ ಸ್ನೇಹಮಯಿ ಕೃಷ್ಣ ಆರಂಭದಿಂದಲೂ ಮುಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸರ ತನಿಖೆಯನ್ನು ಪ್ರಶ್ನಿಸುತ್ತಲೇ ಇದ್ದಾರೆ. ಪ್ರಭಾವದ ದುರ್ಬಳಕೆಯಾಗಿದೆ, ಉದ್ದೇಶಪೂರ್ವಕವಾಗಿಯೇ ಸಾಕ್ಷ್ಯ ನಾಶ ಮಾಡಲಾಗಿದೆ ಎಂಬೆಲ್ಲಾ ಆರೋಪಗಳನ್ನು ಸ್ನೇಹಮಯಿ ಕೃಷ್ಣ ಮಾಡಿದ್ದರು. ಜಾರಿ ನಿರ್ದೇಶನಾಲಯಕ್ಕೂ ಅವರು ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸರಿಗೆ ಪರ್ಯಾಯವಾಗಿ ಜಾರಿ ನಿರ್ದೇಶನಾಲಯ ಕೂಡ ತನಿಖೆ ನಡೆಸಿತ್ತು. ಈ ನಡುವೆ ಲೋಕಾಯಕ್ತ ಪೊಲೀಸರು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಟಿಪ್ಪಣಿ ಬರೆದು ಪ್ರಕರಣದ ತನಿಖೆಯನ್ನು ಅಂತ್ಯಗೊಳಿಸಿದ್ದರು.
