ಉದಯವಾಹಿನಿ, ಕೋಲಾರ: ಜಿಲ್ಲೆಯ ರೈತರು ಕಾಲದಿಂದಲೂ ತಮಗೆ ಒದಗಿ ಬರುವ ಕಷ್ಟಗಳ ವಿರುದ್ಧ ಹೋರಾಡುತ್ತಲೇ ಕೃಷಿ ವಲಯದಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಮುಂದಾಗುವುದು ಇಲ್ಲಿಯ ರೈತನ ಗುಣ ಸ್ವಭಾವವಾಗಿದೆ. ಇದರ ಫಲವಾಗಿ ರೇಷ್ಮೆ, ಹೈನುಗಾರಿಕೆ, ಟೊಮೊಟೊ ಮತ್ತು ಹೂ, ತರಕಾರಿಗಳ ವಿಪುಲವಾದ ಬೆಳೆ. ರಾಷ್ಟ್ರಕವಿ ಕುವೆಂಪು ಅವರ ರೈತ ಗೀತೆಯ ಆಶಯಗಳಿಗೆ ಹತ್ತಿರವಾಗಿಯೇ ಇಲ್ಲಿನ ರೈತನ ಕೃಷಿ ಬದುಕು ಸಾಗುತ್ತಿದೆ. ಧೈರ್ಯ ಗೆಡದೆ ಕೃಷಿ ನಿರತವಾಗುವುದನ್ನು ಮರಸು ನಾಡು ರೈತರಿಂದ ತಿಳಿಯಬೇಕಿದೆ ಎಂದು ಸಾಹಿತಿ ಸ.ರಘುನಾಥ ಅಭಿಪ್ರಾಯಪಟ್ಟಿದ್ದಾರೆ.ಕೋಲಾರ ಜಿಲ್ಲೆಯ ಮೆಣಸಿನಕಾಯಿ ಬೆಳೆಗಾರರ ಪರವಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಕೃಷಿ ಹಂಗಾಮಿನಲ್ಲಿ ಹಲವಾರು ಜನ ರೈತರು ಪ್ರಥಮ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆಯನ್ನು ಇಟ್ಟಿದ್ದಾರೆ. ಫಸಲು ಕಟಾವಿಗೆ ಬಂದಿದೆ. ಇಂಥ ಸಂದರ್ಭದಲ್ಲಿ ಇತರೆ ಕೃಷಿ ಬೆಳೆಗಳಂತೆ ಮೆಣಸಿನಕಾಯಿ ಬೆಳೆಯನ್ನು ನೆಲಕಚ್ಚಿಸಲಾಗಿದೆ.
ಇದು ಒಂದು ಆತಂಕವಾದರೆ ಫಸಲನ್ನು ಮಾರುಕಟ್ಟೆ ಹುಡುಕಿ ಸಾಕಣೆ ಮಾಡುವುದು ಇನ್ನೊಂದು ರೀತಿಯ ಆತಂಕವನ್ನು ಹೊರಡುತ್ತಿದೆ. ಮೆಣಸಿನ ಕಾಯಿಗೆ ಅಚ್ಚುಕಟ್ಟಾದ ಮಾರುಕಟ್ಟೆ, ಕೋಲಾರದ ಹತ್ತಿರದಲ್ಲಿ ಇಲ್ಲ. ಸರಕನ್ನು ಬಳ್ಳಾರಿ, ಬ್ಯಾಡಗಿ, ಗುಂಟೂರು ಮುಂತಾದ ಕಡೆಗೆ ಒಯ್ಯಬೇಕಿದೆ. ಸಾಗಣೆ ವೆಚ್ಚ, ರಸ್ತೆ ಶುಲ್ಕಗಳು, ಫಸಲು ರೂಡಿಸುವ ವೆಚ್ಚ ಎಲ್ಲವೂ ದುಬಾರಿಯಾಗಿರುವುದರಿಂದ ಸರಕಾರ ಘೋಷಿಸುವುದೆಂದು ಹೇಳಲಾಗುತ್ತಿರುವ ಬೆಂಬಲ ಬೆಲೆಯನ್ನು ಜಿಲ್ಲೆಯ ಮೆಣಸಿನ ಕಾಯಿ ಬೆಳೆಗೂ ಅನ್ವಯಿಸಬೇಕಿದೆ. ಹಾಗೆಯೇ ಟೋಲ್‌ಗಳಲ್ಲಿ ವಿಧಿಸುವ ಸುಂಕವನ್ನು ರದ್ದುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಸರಕಾರ ಮತ್ತು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವನ್ನು ಒತ್ತಾಯಿಸಿದ್ದಾರೆ.
