ಉದಯವಾಹಿನಿ,ಹುಬ್ಬಳ್ಳಿ: ಮುಂಗಾರು ವಿಳಂಬ ಒಂದು ಕಡೆ ರಣ ಬಿಸಿಲು ಇನ್ನೊಂದು ಕಡೆ ಬಿತ್ತನೆಗೆ ರೈತರು ಪೂರ್ವ ತಯಾರಿ ಮಾಡಿಕೊಂಡು ಕುಳಿತಿದ್ದು ಇದ್ದ ಬಿದ್ದ ತರಕಾರಿ ರೈತರ ಹೊಲದಲ್ಲಿದ್ದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಇವೆಲ್ಲದರ ಪರಿಣಾಮವಾಗಿ ತರಕಾರಿ ಬೆಲೆಗಳು ಗಗನಕ್ಕೇರಿವೆ. ಮನೆಗಳ ಹತ್ತಿರ ತರಕಾರಿ ಮಾರಾಟಕ್ಕೆ ಬರುವವರು ಕೆಜಿ ಬೀನ್ಸ್ ಗೆ 140ರಿಂದ 150 ರೂ. ಹೇಳುತ್ತಿದ್ದಾರೆ. ಟೊಮ್ಯಾಟೋಕ್ಕೆ 50ರಿಂದ 60 ರೂ. ಎನ್ನುತ್ತಿದ್ದಾರೆ. ಹೀಗೆ, ಎಲ್ಲಾ ತರಕಾರಿಗಳ ದರ ಹೆಚ್ಚಾಗಿದೆ.
ಈ ಬಾರಿ ಇನ್ನೂ ಮಳೆರಾಯ ಇನ್ನೂ ಕೃಪೆ ತೋರಿಲ್ಲ. ಹೀಗಾಗಿ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿಲ್ಲ. ಮತ್ತೊಂದೆಡೆ ಇರುವ ಅಲ್ಪಸ್ವಲ್ಪ ತರಕಾರಿಗಳಿಗೂ ಬೇಡಿಕೆ ಹೆಚ್ಚಾಗಿದ್ದರಿಂದ ಅವುಗಳ ಬೆಲೆಗಳು ಕೂಡ ದುಪ್ಪಟ್ಟಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿವೆ. ಹುಬ್ಬಳ್ಳಿಯ ಎಪಿಎಂಸಿ ಮಾರುಕಟ್ಟೆಯಲ್ಲಿಯೇ ತರಕಾರಿ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದ್ದು, ವರ್ತಕರಿಂದ ಖರೀದಿಸಿ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ತೆಗೆದುಕೊಂಡು ಹೋಗುವ ವ್ಯಾಪಾರಿಗಳು ಖರೀದಿಗೆ ಹಾಕಿದ ದುಡ್ಡ ಬಂದರೆ ಸಾಕು ಎಂಬ ನಿಟ್ಟುಸಿರು ಬೀಡುವಂತಾಗಿದೆ.
