ಉದಯವಾಹಿನಿ,ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಅಕ್ಕಿ ಕಂಟಕ ಮುಂದುವರಿದಿದ್ದು, ಹೊರ ರಾಜ್ಯಗಳಿಂದ ಅಗತ್ಯ ಅಕ್ಕಿ ಖರೀದಿಗೆ ಕಸರತ್ತು ತೀವ್ರಗೊಂಡಿದೆ. ಕೇಂದ್ರದಿಂದ ಅಕ್ಕಿ ಸಿಗದ ಹಿನ್ನಲೆಯಲ್ಲಿ ತೆಲಂಗಾಣ, ಛತ್ತೀಸ್ಗಢ ಹಾಗೂ ಆಂಧ್ರಪ್ರದೇಶದಿಂದ ಅಕ್ಕಿ ಖರೀದಿಗೆ ಪ್ರಯತ್ನಗಳು ತೀವ್ರಗೊಂಡಿದೆ. ನಾಲ್ಕು ದಿನಗಳು ಕಳೆದರೂ ಅಕ್ಕಿ ಲಭ್ಯತೆ ಬಗ್ಗೆ ಸ್ಪಷ್ಟ ಚಿತ್ರಣ ಇನ್ನೂ ದೊರಕಿಲ್ಲ. ಹೊರರಾಜ್ಯಗಳಿಂದ ಅಕ್ಕಿ ಖರೀದಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ” ತೆಲಂಗಾಣದಲ್ಲಿ ನಾನೇ ಅಲ್ಲಿನ ಮುಖ್ಯಮಂತ್ರಿಗಳ ಜೊತೆ ಮಾತಾಡಿದ್ದೀನಿ. ಅಲ್ಲಿ ಅಕ್ಕಿ ಸಿಕ್ತಾ ಇಲ್ವಂತೆ. ನಮ್ಮ ಸಿಎಸ್ ಅವರಿಗೂ ಮಾತಾಡೋಕ್ಕೆ ಹೇಳಿದ್ದೇನೆ ” ಎಂದರು.
ಛತ್ತೀಸ್ಗಢ ಅಕ್ಕಿ ದುಬಾರಿ: ಛತ್ತೀಸ್ಗಢ ರಾಜ್ಯದವರು 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡೋದಾಗಿ ಹೇಳಿದ್ದಾರೆ. ಆದರೆ ಛತ್ತೀಸ್ಗಢದ ಅಕ್ಕಿಗೆ ಸ್ವಲ್ಪ ದರ ಜಾಸ್ತಿ ಇದೆ. ಸಾಗಣೆ ವೆಚ್ಚವೂ ಜಾಸ್ತಿ ಇದೆ. ಈ ನಿಟ್ಟಿನಲ್ಲಿ ಇವತ್ತು ಸಂಜೆ ಸಭೆ ಮಾಡ್ತೇವೆ. ನಂತರ ಇದರ ಬಗ್ಗೆ ತಿಳಿಸುತ್ತೇನೆ ಎಂದರು. ಕಮಿಷನ್‌ಗಾಗಿ ಹೊರ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡ್ತಿದಾರೆ ಎಂಬ ವಿಜಯೇಂದ್ರ ಆರೋಪ ವಿಚಾರವಾಗಿ ಮಾತನಾಡಿ, ” ಹಾಗಾದರೆ ಇಲ್ಲಿ ಅಕ್ಕಿ ಕೊಡಿಸಲಿ ವಿಜಯೇಂದ್ರ. ವಿಜಯೇಂದ್ರ ಮಿಲ್‌ನಲ್ಲಿ ಇದೆಯಾ ಅಷ್ಟು ಅಕ್ಕಿ? ಸುಮ್ನೆ ಮಾತಾಡ್ತಾರೆ ” ಎಂದು ಗರಂ ಆದರು.
