ಉದಯವಾಹಿನಿ, ಇಂಡಿ: ಗ್ರಾಮದ ರಥ ಎಷ್ಟು ಎತ್ತರವಾಗಿದೆ ಎಂಬುದು ಮುಖ್ಯವಲ್ಲ, ಗ್ರಾಮಸ್ಥರಿಗೆ ದೇವರ ಮೇಲೆ ಎಷ್ಟು ಭಕ್ತಿ ಇದೆ ಎಂಬುದು ಮುಖ್ಯ ಎಂದು ಯರನಾಳದ ಪರಮಪೂಜ್ಯ ಸಂಗನಬಸವ ಶ್ರೀಗಳು ಹೇಳಿದರು.
ಶ್ರೀ ಶಂಕರಲಿಂಗ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ನಡೆದ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾತ್ರೆ ಅಥವಾ ರಥೋತ್ಸವ ಸಂದರ್ಭದಲ್ಲಿ ಗ್ರಾಮದಲ್ಲಿ ಹುಟ್ಟಿ ಬೆಳೆದು ಬೇರೆ ಬೇರೆ ನಗರಗಳಲ್ಲಿ ವಾಸಿಸಿರುವ ಎಲ್ಲರೂ ಹುಟ್ಟುರಿಗೆ ಬರುತ್ತಾರೆ. ಅಷ್ಟೇ ಅಲ್ಲ, ಮದುವೆಯಾಗಿ ಬೇರೆ ಬೇರೆ ಭಾಗಗಳಲ್ಲಿ ಪತಿ ಕುಟುಂಬದವರೊಂದಿಗೆ ವಾಸವಿರುವ ಹೆಣ್ಣುಮಕ್ಕಳನ್ನು ತವರೂರಿಗೆ ಕರೆ ತರುವ ವಿಶೇಷ ಶಕ್ತಿ ಇರುವದು ಜಾತ್ರೆಗಳಿಗೆ ಮಾತ್ರ ಎಂದರು.
ಗ್ರಾಮದ ಎಲ್ಲರನ್ನು ಒಂದುಗೂಡಿಸುವ ಹಾಗೂ ಸಂಘಟಕರನ್ನಾಗಿ ಮಾಡುವ ಶಕ್ತಿ ರಥೋತ್ಸವಕ್ಕೆ ಇದೆ. ರೈತರು ಎಲ್ಲ ರಾಶಿಗಳನ್ನು ಮಾಡಿ ಸಂತೋಷ ಸಂಭ್ರಮದಿಂದ ಜಾತ್ರೆ ರಥೋತ್ಸವ ಆಚರಿಸುತ್ತಿರುವದು ಹೆಮ್ಮೆಯ ಸಂಗತಿ ಎಂದರು.
ವಿಜ್ರಂಭಣೆಯಿಂದ ಜರುಗಿದ ಅಗ್ನಿ ಶಮನ ಕಾರ್ಯಕ್ರಮ
ಬಂಥನಾಳ ಶೀಗಳ ಅಡ್ಡಪಲ್ಲಕ್ಕಿ, ನಂದಿಕೋಲು ಉತ್ಸವ ಹಾಗೂ ಅಗ್ನಿ ಶಮನ ಕಾರ್ಯಕ್ರಮ ವಿಜ್ರಂಭಣೆಯಿಂದ ಜರುಗಿತು.
ಅತ್ಯಂತ ಶ್ರದ್ಧಾಭಕ್ತಿಯಿಂದ ಸಂಪ್ರದಾಯದಂತೆ ಇಲ್ಲಿನ ಕಮರಿಮಠದ ಒಳ ಆವರಣದಿಂದ ವಾದ್ಯಮೇಳ, ಜಯಘೋಷಗಳೊಂದಿಗೆ ಕಮರಿಮಠದ ಒಳ ಆವರಣದಿಂದ ಆರಂಭವಾದ ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳ ಭಾವಚಿತ್ರ ಹೊತ್ತ ಅಡ್ಡ ಪಲ್ಲಕ್ಕಿ ಮೆರವಣಿಗೆ ನಡೆಯಿತು.
