ಉದಯವಾಹಿನಿ, ಬೆಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವ ಅಗತ್ಯವಿಲ್ಲ, ನಮ್ಮ ಪೊಲೀಸರು ಸಮರ್ಥವಾಗಿ ಕೆಲಸ ಮಾಡುತ್ತಿದ್ದು, 8 ಮಂದಿಯನ್ನು ಬಂಧಿಸಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಆರೋಪಿಗಳ ಬಂಧನವಾಗಿರುವಾಗ ಎನ್ಐಎ ತನಿಖೆ ಅಗತ್ಯವಿಲ್ಲ, ಬಿಜೆಪಿಯವರು ಎನ್‌ಐಎ ತನಿಖೆಗೆ ಒತ್ತಾಯಿಸುವುದು ಅವರ ಅಭಿಪ್ರಾಯ ಎಂದರು.
ನಮ್ಮ ಪ್ರಕಾರ, ತನಿಖೆ ಮುಂದುವರೆದರೆ ಆರೋಪಿಗಳ ಬಂಧನವಾಗುತ್ತದೆ. ಸರಿಯಾದ ದಿಕ್ಕಿನಲ್ಲಿ ವಿಚಾರಣೆಯಾಗುತ್ತದೆ ಎಂದು ಹೇಳಿದರು. ಸುಹಾಸ್ ಶೆಟ್ಟಿ ಅವರ ಮನೆಗೆ ಸರ್ಕಾರದ ಪ್ರತಿನಿಧಿಗಳು ಭೇಟಿ ನೀಡದೇ ಇರುವ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಇದೊಂದು ಕೊಲೆ ಪ್ರಕರಣ. ಸುಹಾಸ್ ಶೆಟ್ಟಿಯ ಮೇಲೆ ಕೊಲೆಗಳು ಸೇರಿದಂತೆ 5 ಕ್ರಿಮಿನಲ್ ಪ್ರಕರಣಗಳಿದ್ದವು. ಈ ಕಾರಣಕ್ಕೆ ಜವಾಬ್ದಾರಿ ಸ್ಥಾನದಲ್ಲಿರುವ ನಾನೂ ಸೇರಿದಂತೆ ಯಾವುದೇ ಪ್ರತಿನಿಧಿಗಳು ಭೇಟಿ ನೀಡಲಿಲ್ಲ ಎಂದು ಹೇಳಿದ ಅವರು, ಸುಹಾಸ್ ಶೆಟ್ಟಿ ಕುಟುಂಬಕ್ಕೆ ನ್ಯಾಯ ಕೊಡಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು. ಕೊಲೆ ಪ್ರಕರಣದಲ್ಲಿ ಯಾರನ್ನೋ ಆರೋಪಿಗಳು ಎಂದು ಬಂಧಿಸಲು ಸಾಧ್ಯವಿಲ್ಲ. ಸುಹಾಸ್‌ಶೆಟ್ಟಿ ಕೊಲೆಯಲ್ಲಿ ಹಿಂದೂ ಸಮುದಾಯದ ಆರೋಪಿಗಳನ್ನು ಬಂಧಿಸುವ ಮೂಲಕ ದಾರಿ ತಪ್ಪಿಸಲಾಗುತ್ತಿದೆ ಎಂಬುದು ಅನಗತ್ಯ ಆರೋಪ ಎಂದು ಹೇಳಿದರು.
