ಉದಯವಾಹಿನಿ,ಬೆಂಗಳೂರು : ಮಹಿಳೆಯರ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ ಜಾರಿ ಬಳಿಕ ರಾಜ್ಯದಲ್ಲಿ ಸಾರಿಗೆ ಬಸ್‌ಗಳ ಪ್ರಯಾಣಿಕರ ಸಂಖ್ಯೆ 35 ರಿಂದ 40 ಲಕ್ಷ ಹೆಚ್ಚಳವಾಗಿದೆ!ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆ ಜಾರಿಯಾದ ಬಳಿಕ ದಿನೇದಿನೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯವ್ಯ ಕರ್ನಾಟಕ ಸಾರಿಗೆ ನಿಗಮ (ಎನ್‌ಡಬ್ಲ್ಯೂಕೆಆರ್‌ಟಿಸಿ), ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಈ ನಾಲ್ಕು ನಿಗಮಗಳ ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ.
ಶಕ್ತಿ ಯೋಜನೆ ಜಾರಿಯಾಗುವ ಮುನ್ನ ನಾಲ್ಕು ನಿಗಮಗಳಲ್ಲಿ ಸರಾಸರಿ ನಿತ್ಯ 75ರಿಂದ 80 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿಯಾದ ಬಳಿಕ ನಾಲ್ಕು ನಿಗಮಗಳಲ್ಲಿ1.16 ಕೋಟಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಹಾಗಾಗಿ, ನಿತ್ಯ ಸುಮಾರು 35ರಿಂದ 40 ಲಕ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಂಕಿ ಅಂಶಗಳು ಹೇಳುತ್ತಿವೆ. ಹೆಚ್ಚಳವಾಗಿರುವ ಪ್ರಯಾಣಿಕರಲ್ಲಿ ಬಹುತೇಕರು ಮಹಿಳಾ ಪ್ರಯಾಣಿಕರು. ದೂರದ ಊರುಗಳಿಗೆ ಪತ್ನಿ ಜತೆ ಪತಿ ಸಹ ಪ್ರಯಾಣಿಸುವುದೂ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಧಾರ್ಮಿಕ ಸ್ಥಳಗಳಿಗೆ ತೆರಳುವ ಬಸ್‌ಗಳಲ್ಲಿಯೇ ಹೆಚ್ಚಿನ ದಟ್ಟಣೆ ಕಂಡುಬಂದಿದೆ. ಇನ್ನು, ಖಾಸಗಿ ಬಸ್‌ಗಳು ಹಾಗೂ ಆಟೋಗಳಿಗೆ ಶೇ.80ರಷ್ಟು ಪ್ರಯಾಣಿಕರು ಕಡಿಮೆಯಾಗಿದ್ದಾರೆ. ರಾಜ್ಯ ಸರಕಾರ ಜಾರಿಗೊಳಿಸಿರುವ ‘ಶಕ್ತಿ’ ಯೋಜನೆಯಿಂದಾಗಿ ಸಾರಿಗೆ ನಿಗಮಗಳ ಸಾಮಾನ್ಯ ಮತ್ತು ವೇಗದೂತ ಬಸ್‌ಗಳು ತುಂಬಿ ತುಳುಕುತ್ತಿದ್ದರೆ, ರಾಜಹಂಸ ಮತ್ತು ಸ್ಲೀಪರ್ ಕೋಚ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.
