ಉದಯವಾಹಿನಿ, ನವದೆಹಲಿ: ಮಾಜಿ ಸಚಿವ ಹಾಗೂ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಇತರ ನಾಲ್ಕು ಮಂದಿ ಆರೋಪಿಉಗಳನ್ನು ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ದೋಷಿಗಳು ಎಂದು ಘೋಷಿಸಿದ್ದು, ಏಳು ವರ್ಷಗಳ ಕಾರಾಗೃಹ ಶಿಕ್ಷೆ ಪ್ರಕಟಿಸಿದೆ.ಓಬಳಾಪುರಂ ಮೈನಿಂಗ್ ಸಂಸ್ಥೆ ಅಕ್ರಮ ಗಣಿಗಾರಿಕೆ ನಡೆಸಿ 29 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ಮಾರಾಟ ಮಾಡಿಕೊಂಡು, ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ ಆರೋಪಕ್ಕೆ ಆರೋಪಿಗಳು ಗುರಿಯಾಗಿದ್ದರು. ಸುಮಾರು 16 ವರ್ಷದ ಬಳಿಕ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸಿದೆ. ಈ ಮೂಲಕ ರಾಜ್ಯದಲ್ಲದಷ್ಟೆ ಅಲ್ಲದೆ ರಾಷ್ಟ್ರ ಮಟ್ಟದಲ್ಲೂ ಭಾರೀ ಸದ್ದು ಮಾಡಿದ್ದ ಅಕ್ರಮ ಗಣಿಗಾರಿಕೆ ತಾತ್ವಿಕ ಹಂತಕ್ಕೆ ತಲುಪಿದಂತಾಗಿದೆ.
2008ರ ನಂತರ ಬಳ್ಳಾರಿ, ತುಮಕೂರು, ಚಿತ್ರದುರ್ಗ ಹಾಗೂ ಆಂಧ್ರ ಪ್ರದೇಶ ಗಡಿ ಭಾಗದಲ್ಲಿ ನಡೆದ ಅಕ್ರಮ ಗಣಿಗಾರಿಕೆಗಳು ಭಾರಿ ಸದ್ದು ಮಾಡಿತ್ತು. ಸಾಮಾಜಿಕ ಪರಿವರ್ತನಾ ಸಂಸ್ಥೆ ಮುಖ್ಯಸ್ಥ ಎಸ್.ಆರ್.ಹಿರೇಮಠ ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಸಿಬಿಐ ತನಿಖೆಗೆ ಆದೇಶಿಸಿತ್ತು.ತನಿಖೆ ಪೂರ್ಣಗೊಂಡು ಸಿಬಿಐ ನ್ಯಾಯಾಲಯದ ದೋಷಾರೋಪಣ ಪಟ್ಟಿ ಸಲ್ಲಿಸಿದೆ. ಅದರ ಅನುಸಾರ ವಾದ-ವಿವಾದ ಆಲಿಸಿ ಇಂದು ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಮೊದಲ ಆರೋಪಿ ಬಿ ವಿ.ಶ್ರೀನಿವಾಸ ರೆಡ್ಡಿ, ಎರಡನೇ ಆರೋಪಿ ಗಾಲಿ ಜನಾರ್ದನ ರೆಡ್ಡಿ, ಆಂಧ್ರ ಪ್ರದೇಶದ ಮಾಜಿ ಸಚಿವ ಸಬಿತಾ ಇಂದ್ರಾ ರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಕೃಪಾನಂದಂ ಹಾಗೂ ಓಬಳಾಪುರಂನ ವಿ.ಡಿ.ರಾಜ್ ಅವರನ್ನು ದೋಷಿಗಳು ಎಂದು ಪ್ರಕಟಿಸಿ, ಏಳು ವರ್ಷಗಳ ಶಿಕ್ಷೆಯನ್ನು ಘೋಷಿಸಿದೆ.
ಶಿಕ್ಷೆ ಪ್ರಕಟಗೊಳ್ಳುತ್ತಿದ್ದಂತೆ ಭಾವೋದ್ವೇಗಕ್ಕೆ ಒಳಗಾದ ಜನಾರ್ದನ ರೆಡ್ಡಿ, ತಾವು ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಸಾಕಷ್ಟು ಸಾಮಾಜಿಕ ಸೇವೆಯಲ್ಲಿದ್ದೇನೆ. ಶಾಸಕನಾಗಿದ್ದೇನೆ. ಮೂರುವರೆ ವರ್ಷ ಜೈಲಿನಲ್ಲಿದ್ದೆ. ದಯವಿಟ್ಟು ಶಿಕ್ಷೆ ಕಡಿಮೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಅದಕ್ಕೆ ಸಹಮತ ವ್ಯಕ್ತ ಪಡಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಮೂರ್ತಿಯವರು, ಶಿಕ್ಷೆ ಯಾಕೆ ಕಡಿಮೆ ಮಾಡಬೇಕು. ನಿಮಗೆ 10 ವರ್ಷಕ್ಕಿಂತಲೂ ಹೆಚ್ಚು ಶಿಕ್ಷೆಗೆ ಅರ್ಹರು. ಜೀವಾವಧಿಯಾದರೂ ಕಡಿಮೆಯೇ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಹೇಳಿಕೆ ಕೇಳಿ ಜನಾರ್ದನ ರೆಡ್ಡಿ ಜಂಘಾಬಲ ಹುಡುಗಿ ಹೋಗಿದೆ.

 

Leave a Reply

Your email address will not be published. Required fields are marked *

error: Content is protected !!