ಉದಯವಾಹಿನಿ , ಋತುಮಾನದ ಹಣ್ಣುಗಳ ಬಗ್ಗೆ ಹೇಳುವಾಗ ನಮ್ಮ ಮಾರುಕಟ್ಟೆಗಳಿಗೆ ಕೊಂಚ ಹೊಸದು ಎನಿಸುವ ಪರ್ಸಿಮನ್ ಎಂಬ ಕಡು ಕೇಸರಿ ಬಣ್ಣದ ಹಣ್ಣಿನ ಬಗ್ಗೆ ಹೇಳಲೇಬೇಕು. ನೋಡುವುದಕ್ಕೆ ಪುಟ್ಟ ಕುಂಬಳಕಾಯಿಯನ್ನೇ ಹೋಲುವ ಇದನ್ನು ʻಕಾಕಿ ಹಣ್ಣುʼ ಎಂದೂ ಕರೆಯಲಾಗುತ್ತದೆ. ಮೂಲದಲ್ಲಿ ಚೀನಾದಿಂದ ವಿಶ್ವದ ಉಳಿದೆಡೆಗಳಿಗೆ ಹರಡಿರುವ ಈ ಬೆಳೆ ಕೈಗೆ ಬರುವುದು ಹೊರಗಿನಿಂದಲೇ ಭಾರತದ ಮಾರುಕಟ್ಟೆ ಬರುವುದರಿಂದ ಋತುವಿನಲ್ಲೂ ಇದರ ಬೆಲೆಯೇನು ತೀರಾ ಕಡಿಮೆ ಇರುವುದಿಲ್ಲ. ಹಾಗೆಂದು ಕೊಟ್ಟ ದುಡ್ಡಿಗೆ ಮೋಸವಾಗುವಂಥದ್ದಲ್ಲ ಇದರ ರುಚಿ ಮತ್ತು ಸತ್ವ. ಜೇನಿನಂತೆ ಮಧುರವಾದ ರುಚಿಯನ್ನು ಹೊಂದಿರುವ ಇದನ್ನು ಕಳಿತ ಮೇಲಷ್ಟೇ ತಿನ್ನಲು ಸಾಧ್ಯ. ಚೆನ್ನಾಗಿ ಹಣ್ಣಾಗದಿದ್ದರೆ ಒಗರಾದ ರುಚಿಯನ್ನಷ್ಟೇ ಈ ಕಾಯಿ ನೀಡಬಲ್ಲದು. ಇದನ್ನು ನೇರವಾಗಿ ತಿನ್ನುವುದೇ ಅಲ್ಲದೆ, ಜ್ಯಾಮ್, ಜೆಲ್ಲಿ, ಪೈ, ಕೇಕ್, ಪುಡ್ಡಿಂಗ್, ಸಲಾಡ್ ಮುಂತಾದ ಹಲವು ರೀತಿಯ ಪಾಕಗಳ ಮೂಲಕ ಸವಿಯಲಾಗುತ್ತದೆ.
ಒಂದು ಮಧ್ಯಮ ಗಾತ್ರದ ಪರ್ಸಿಮನ್ ಹಣ್ಣು 120 ಕ್ಯಾಲರಿ ಶಕ್ತಿಯನ್ನು ನೀಡಬಲ್ಲದು. ಅದರಲ್ಲಿ ಸುಮಾರು 30 ಗ್ರಾಂ ಪಿಷ್ಟ, 1 ಗ್ರಾಂ ಪ್ರೊಟೀನ್, ನಗಣ್ಯ ಎನ್ನುವಷ್ಟು ಕೊಬ್ಬು, 6 ಗ್ರಾಂನಷ್ಟು ನಾರು, ಶೇ. 15ರಷ್ಟು ವಿಟಮಿನ್ ಎ, ಶೇ. 18ರಷ್ಟು ವಿಟಮಿನ್ ಸಿ, ಶೇ. 10ರಷ್ಟು ವಿಟಮಿನ್ ಇ, ವಿಟಮಿನ್ ಬಿ6, ವಿಟಮಿನ್ ಕೆ, ಫೋಲೇಟ್, ಪೊಟಾಶಿಯಂ, ತಾಮ್ರ, ಮ್ಯಾಂಗನೀಸ್ನಂಥ ಖನಿಜಗಳು ದೊರೆಯುತ್ತವೆ. ಇದಲ್ಲದೆ ಟ್ಯಾನಿನ್‌ಗಳು, ಫ್ಲೆವನಾಯ್ಡ್‌ಗಳು ಮತ್ತು ಕೆರೊಟಿನಾಯ್ಡ್‌ಗಳಿಂದ ತುಂಬಿದೆ. ಈ ಮರದ ಎಲೆಗಳನ್ನು ಚಹಾ ಮಾಡಿ ಔಷಧಿಯಾಗಿ ಸೇವಿಸಲಾಗುತ್ತದೆ.
ಗಾಢ ಬಣ್ಣದ ಹಣ್ಣು, ತರಕಾರಿಗಳನ್ನು ಸೇವಿಸುವುದರ ದೊಡ್ಡ ಲಾಭ ವೆಂದರೆ ಅಗಾಧ ಪ್ರಮಾಣದಲ್ಲಿ ಬೀಟಾ ಕ್ಯಾರೊಟಿನ್ ಲಭ್ಯವಾಗುವುದು. ಕಡು ಬಣ್ಣದ ಬೀಟ್ ರೂಟ್, ಕ್ಯಾರೆಟ್ ಮುಂತಾದವುಗಳಲ್ಲೂ ಬೀಟಾ ಕ್ಯಾರೊಟಿನ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಪರ್ಸಿಮನ್ ಸಹ ಇದಕ್ಕೆ ಹೊರತಲ್ಲ. ಈ ಉತ್ಕರ್ಷಣ ನಿರೋಧಕ ದೇಹಕ್ಕೆ ಹೆಚ್ಚಾಗಿ ಲಭಿಸಿದಂತೆ ಹಲವು ರೀತಿಯ ಕ್ಯಾನ್ಸರ್‌ಗಳು, ಹೃದಯ ಸಂಬಂಧಿ ತೊಂದರೆಗಳನ್ನು ದೂರ ಇರಿಸಬಹುದು. ಇದಷ್ಟೇ ಅಲ್ಲ, ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಬೀಟಾ ಕ್ಯಾರೊಟಿನ್ ದೊರೆತರೆ, ಟೈಪ್‌೨ ಮಧುಮೇಹದ ಸಾಧ್ಯತೆ ಕಡಿಮೆಯಾಗುತ್ತದೆ.
ಕೆಲವು ಫ್ಲೆವನಾಯ್ಡ್‌ಗಳು ಹೃದಯದ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಕ್ವೆರ್ಸೆಟಿನ್ ಮತ್ತು ಕೆಂಫೆರೋಲ್‌ನಂಥ ಉತ್ಕರ್ಷಣ ನಿರೋಧಕಗಳು ಪರ್ಸಿಮನ್ ನಲ್ಲಿದ್ದು, ಇದು ಹೃದಯಕ್ಕೆ ಬೇಕಾದಂಥವು ಎನ್ನುತ್ತವೆ ಅಧ್ಯಯನಗಳು. ಇವು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ ಮತ್ತು ಉರಿಯೂತ ಶಮನ ಮಾಡುತ್ತವೆ. ಪರ್ಸಿಮನ್ ಕಾಯಿಗಳಿಗೆ ಇರುವಂಥ ಒಗರು ರುಚಿಗೆ ಕಾರಣವಾಗುವ ಟ್ಯಾನಿನ್ ಗಳು ಹೃದಯಕ್ಕೆ ಆಪ್ತವಾದಂಥವು.
