ಉದಯವಾಹಿನಿ , ಬೆಂಗಳೂರು: ಮೈಯೆಲ್ಲಾ ರೋಮವಿರುವಂತೆ ಕಾಣುವ, ಕಂದು ಬಣ್ಣದ ಪುಟ್ಟ ಹಣ್ಣು ಕಿವಿ ಚಳಿಗಾಲದ ಋತುವಿನಲ್ಲಿ ದೊರೆಯುವ ಈ ಹಣ್ಣನ್ನು ಒಳಗೆ ಕತ್ತರಿಸಿದರೆ, ಕಡು ಹಸಿರು ಬಣ್ಣದ ತಿರುಳು ದೊರೆಯುತ್ತದೆ. ಇದರಲ್ಲೇ ಪುಟ್ಟ ಕಪ್ಪುವರ್ಣದ ಬೀಜಗಳನ್ನು ಕಾಣಬಹುದು. ಪೂರ್ಣ ಕಳಿತು ಹಣ್ಣಾದರೆ ಸಕ್ಕರೆಯಂಥ ಸಿಹಿ, ಇಲ್ಲದಿದ್ದರೆ ಹುಚ್ಚು ಹುಳಿ! ಹಾಗಾಗಿ ಕಿವಿ ಹಣ್ಣುಗಳನ್ನು ಚೆನ್ನಾಗಿ ಮಾಗಿಸಿಕೊಂಡು ತಿಂದವರಷ್ಟೇ ಬಲ್ಲರು ಅದರ ಸವಿಯ. ಹೆಚ್ಚಿನವರಿಗೆ ಕಿವಿಯೆಂದರೆ ಹುಳಿ ಹಣ್ಣೆಂದೇ ಮುಖ ಕಿವುಚುವಂತಾಗುತ್ತದೆ.

ಚಳಿಗಾಲದಲ್ಲಿ ಈ ಹಣ್ಣನ್ನು ತಿನ್ನಲೇಬೇಕೆನ್ನುವುದಕ್ಕೆ ಕಾರಣ ಇದರಲ್ಲಿರುವ ಸತ್ವಗಳು. ವಿಟಮಿನ್‌ ಸಿ ಭರಪೂರ ಇರುವ ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಾಂದ್ರವಾಗಿವೆ. ನಾರು ಸಹ ಹೇರಳವಾಗಿದ್ದು ಹೊಟ್ಟೆಯ ಆರೋಗ್ಯವನ್ನು ಚೆನ್ನಾಗಿಡುತ್ತದೆ. ಮಾಗಿದ ಹಣ್ಣಿನ ರುಚಿ ಸಿಹಿಯೇ ಇದ್ದರೂ, ಮಧುಮೇಹಿಗಳಿಗೆ ಪೂರಕವಾದ ಆಹಾರವಿದು. ಡೆಂಗೂ ರೋಗಿಗಳಿಗೆ ನೀಡಲೇಬೇಕಾದ ಆಹಾರವಿದು. ಹಾಗಾದರೆ ಏನಿದರ ವೈಶಿಷ್ಟ್ಯಗಳು ಎಂಬುದನ್ನು ತಿಳಿಯೋಣ ಈಗ.

ಸಿ ಜೀವಸತ್ವ ಹೇರಳವಾಗಿರುವ ಈ ಹಣ್ಣು ದೇಹದ ಪ್ರತಿರೋಧಕ ಶಕ್ತಿಗೆ ಭೀಮಬಲ ನೀಡುತ್ತದೆ. ಒಂದು ದೊಡ್ಡ ಕಿವಿಹಣ್ಣು ಒಂದಿಡೀ ದಿನಕ್ಕೆ ದೇಹಕ್ಕೆ ಅಗತ್ಯವಾದ ವಿಟಮಿನ್‌ ಸಿ ಪ್ರಮಾಣವನ್ನು ಶರೀರಕ್ಕೆ ಒದಗಿಸುತ್ತದೆ ಎಂದರೆ ಅದಿನ್ನೆಂಥ ಖಜಾನೆಯಾಗಿರಬಹುದು ಇದು ಸಿ ಜೀವಸತ್ವದ್ದು! ಇದಕ್ಕಾಗಿಯೇ ಚಳಿಗಾಲದಲ್ಲಿ ಕಿವಿ ಹಣ್ಣು ಅಗತ್ಯವಾಗಿ ಬೇಕು ಎನ್ನುವುದು. ದೇಹದ ರೋಗ ನಿರೋಧಕ ಶಕ್ತಿಯನ್ನು ಕುಗ್ಗದಂತೆ ಕಾಯ್ದಿರಿಸುತ್ತದೆ ಇದು.

ಉತ್ಕರ್ಷಣ ನಿರೋಧಕಗಳು:ಹಲವು ರೀತಿಯ ಪಾಲಿಫೆನಾಲ್‌ಗಳು ಮತ್ತು ಕೆರೊಟಿನಾಯ್ಡ್‌ಗಳಿರುವ ಈ ಹಣ್ಣು ಶರೀರದಲ್ಲಿ ಮುಕ್ತ ಕಣಗಳ ಹಾವಳಿಯನ್ನು ತಗ್ಗಿಸುತ್ತದೆ. ಇದರಿಂದ ಉರಿಯೂತ-ಜನ್ಯ ಹಲವು ರೋಗಗಳನ್ನು ದೂರ ಇರಿಸಬಹುದು. ಮಾತ್ರವಲ್ಲ, ಕ್ಯಾನ್ಸರ್‌ನಂಥ ಮಾರಕ ರೋಗಗಳ ಭೀತಿ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *

error: Content is protected !!