ಉದಯವಾಹಿನಿ , ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಸುಗ್ಗಿ ಹಬ್ಬವಾದ ಇದನ್ನು ಉತ್ತರ ಭಾರತದಲ್ಲಿ ಲೋಹ್ರಿ ಎಂದು ಕರೆದರೆ, ತಮಿಳುನಾಡಿನಲ್ಲಿ ಪೊಂಗಲ್ ಎಂದೂ ಹಾಗೂ ಕರ್ನಾಟಕ ಸೇರಿದಂತೆ ಇನ್ನೂ ಕೆಲವು ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ಹಬ್ಬದಲ್ಲಿ ಎಳ್ಳು ಬೆಲ್ಲವನ್ನು ಸೇವಿಸುವ ಸಂಪ್ರದಾಯವಿದೆ. ಜೊತೆಗೆ ಎಳ್ಳು ಮತ್ತು ಬೆಲ್ಲವನ್ನು ಬಳಸಿ ವಿವಿಧ ಖಾದ್ಯಗಳನ್ನು ಸಹ ತಯಾರಿಸಲಾಗುತ್ತದೆ. ಹೀಗಿರುವಾಗ ಈ ಬಾರಿಯ ಹಬ್ಬಕ್ಕೆ ಶೇಂಗಾ ಎಳ್ಳಿನ ಉಂಡೆಯನ್ನು ಮಾಡಿ. ಈ ಲಡ್ಡು ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೂ ಪ್ರಯೋಜನಕಾರಿ.
ಶೇಂಗಾ-ಎಳ್ಳಿನ ಉಂಡೆಯ ಆರೋಗ್ಯ ಪ್ರಯೋಜನ:
ಚಳಿಗಾಲದಲ್ಲಿ ಎಳ್ಳು ಮತ್ತು ಶೇಂಗಾ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಎಳ್ಳು ಕ್ಯಾಲ್ಸಿಯಂ, ಕಬ್ಬಿಣ ಮತ್ತು ನಾರಿನಾಂಶದಿಂದ ಸಮೃದ್ಧವಾಗಿದೆ. ಶೇಂಗಾ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದ್ದು, ಇದು ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ ಈ ಉಂಡೆಯನ್ನು ತಯಾರಿಸಲು ಬೆಲ್ಲವನ್ನು ಬಳಸಲಾಗುತ್ತದೆ. ಈ ಬೆಲ್ಲ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಶೇಂಗಾ ಎಳ್ಳಿನ ಉಂಡೆಯನ್ನು ತಯಾರಿಸಲು ಬೇಕಾದ ಸಾಮಾಗ್ರಿಗಳು:
ಬಿಳಿ ಎಳ್ಳು – 1 ಕಪ್
ಶೇಂಗಾ – 1 ಕಪ್
ಬೆಲ್ಲ – 1 ಕಪ್
ಅರ್ಧ ಟೀ ಚಮಚ ಏಲಕ್ಕಿ ಪುಡಿ
ಸ್ವಲ್ಪ ತುಪ್ಪ
ಶೇಂಗಾ ಎಳ್ಳಿನ ಉಂಡೆಯನ್ನು ತಯಾರಿಸುವ ವಿಧಾನ:
ಮೊದಲಿಗೆ ಗ್ಯಾಸ್ ಸ್ಟೌವ್ ಮೇಲೆ ಒಂದು ಬಾಣಲೆಯನ್ನಿಟ್ಟು ಅದರಲ್ಲಿ ಎಳ್ಳನ್ನು ಕಡಿಮೆ ಉರಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಬೇಕು. ಅದನ್ನು ಪಕ್ಕಕ್ಕೆ ಇರಿಸಿ ನಂತರ ಅದೇ ಬಾಣಲೆಯಲ್ಲಿ ಸಿಪ್ಪೆ ತೆಗೆದ ಶೇಂಗಾವನ್ನು ಕಡಿಮೆ ಉರಿಯಲ್ಲಿ ಹುರಿದು, ಅದು ತಣ್ಣಗಾದ ನಂತರ ಸಿಪ್ಪೆ ತೆಗೆಯಿರಿ. ನಂತರ ಆ ಕಡಲೆಕಾಯಿಯನ್ನು ತರಿತರಿಯಾಗಿ ರುಬ್ಬಿಕೊಳ್ಳಿ ಜೊತೆಗೆ ಅದಕ್ಕೆ ಏಲಕ್ಕಿಯನ್ನೂ ಸೇರಿಸಿ.
ಈಗ ಒಂದು ಪ್ಯಾನ್‌ಗೆ ತುಪ್ಪ ಸೇರಿಸಿ ಅದಕ್ಕೆ ಬೆಲ್ಲವನ್ನು ಹಾಕಿ ಪಾಕ ತಯಾರಿಸಿ, ಬೆಲ್ಲ ಸಂಪೂರ್ಣವಾಗಿ ಕರಗಿದ ಬಳಿಕ ಅದಕ್ಕೆ ಹುರಿದ ಎಳ್ಳು ಮತ್ತು ಕಡಲೆಕಾಯಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಒಲೆಯನ್ನು ಆಫ್ ಮಾಡಿ ಮತ್ತು ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ. ಮಿಶ್ರಣ ತಣ್ಣಗಾದ ನಂತರ ನಿಮ್ಮ ಕೈಗಳಿಗೆ ತುಪ್ಪವನ್ನು ಹಚ್ಚಿ, ಉಂಡೆ ತಯಾರಿಸಿದರೆ ರುಚಿಕರ ಹಾಗೆಯೇ ಆರೋಗ್ಯಕರ ಶೇಂಗಾ-ಎಳ್ಳಿನ ಉಂಡೆ ಸಿದ್ಧ.
